ಜನರು ಕೊಟ್ಟ ಅಧಿಕಾರವನ್ನು ಇನ್ನೂ 20 ತಿಂಗಳ ಕಾಲ ನಡೆಸಿಕೊಂಡು ಹೋಗಲು ಅವಕಾಶವಿತ್ತು. ಆದರೆ ಬಿಜೆಪಿ-ಜೆಡಿಎಸ್ ಪಕ್ಷಗಳು ಪರಸ್ಪರ ಆರೋಪ ಹಾಗೂ ಬ್ಲಾಕ್‌ಮೇಲ್‌ಗಳಲ್ಲೇ ತೊಡಗಿ ಮಧ್ಯಂತರ ಚುನಾವಣೆಗೆ ಕಾರಣವಾಗಿವೆ ಎಂದು ವಿಧಾನಪರಿಷತ್ ಮಾಜಿ ಪ್ರತಿಪಕ್ಷ ನಾಯಕ ಎಚ್.ಕೆ.ಪಾಟೀಲ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಹಮ್ಮಿಕೊಂಡಿರುವ ಜನಾಂದೋಲನ ಯಾತ್ರೆಯಲ್ಲಿ ಮಾತನಾಡುತ್ತಿದ್ದ ಅವರು, ಬಿಜೆಪಿ-ಜೆಡಿಎಸ್ ಪಕ್ಷಗಳ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರಕ್ಕೆ ಪ್ರಾಮುಖ್ಯತೆ ಇತ್ತೇ ವಿನಃ ಜನಕಲ್ಯಾಣಕ್ಕಲ್ಲ. ನೌಕರರ ವರ್ಗಾವಣೆಯೂ ಸೇರಿದಂತೆ ಪ್ರತಿ ವಿಷಯದಲ್ಲೂ ಹಣಕ್ಕೇ ಪ್ರಾಧಾನ್ಯತೆ ಇತ್ತು ಎಂದು ಅವರು ತಿಳಿಸಿದರು.
ಧರ್ಮಯಾತ್ರೆ ಕೈಗೊಳ್ಳುವಾಗ ಯಡಿಯೂರಪ್ಪನವರಿಗೆ ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಬೇಕಾಗಿತ್ತು. ಆದರೆ ಅವರಲ್ಲಿ ಅಧಿಕಾರದ ಆಸೆ ಇದ್ದುದರಿಂದಲೇ ಮತ್ತೆ ಕುಮಾರಸ್ವಾಮಿ ಬಳಿಗೆ ಹೋದರು. ಅವರು ಧರ್ಮಯಾತ್ರೆಯನ್ನೇ ಮುಂದುವರಿಸಬಹುದಿತ್ತಲ್ಲ ಎಂದು ಗೇಲಿ ಮಾಡಿದರು ಪಾಟೀಲ್.
ತೀಕ್ಷ್ಣ ಮಾತಿಗೆ ಹೆಸರಾದ ಡಿ.ಕೆ. ಶಿವಕುಮಾರ್ ತಮ್ಮ ಭಾಷಣಕ್ಕೆ ಸಾಹಿತ್ಯದ ಲೇಪ ನೀಡಿದ್ದು ವಿಶೇಷವಾಗಿತ್ತು. 'ನಿಂಬೆಗಿನ್ನ ಹುಳಿಯಿಲ್ಲ, ದುಂಬಿಗಿನ್ನ ಕರಿಯಿಲ್ಲ, ಶಂಭುಕ್ಕಿನ್ನ ಅಧಿಕ ದೇವರಿಲ್ಲ, ನಂಬಿಕೆಗಿನ್ನ ಅಧಿಕ ಗುಣವಿಲ್ಲ' ಎಂಬ ಮಾತುಗಳು ಕಾಂಗ್ರೆಸಿಗೆ ಲಗತ್ತಾಗಿವೆ ಎಂದು ಅವರು ನುಡಿದದ್ದು ಎಲ್ಲರನ್ನೂ ಆಕರ್ಷಿಸಿತು.
|