ಮಹತ್ವಾಕಾಂಕ್ಷೆಯ, ಬಹುದಿನದ ನಿರೀಕ್ಷೆಯ ಮಂಗಳೂರು-ಬೆಂಗಳೂರು ಪ್ರಯಾಣಿಕರ ರೈಲಿಗೆ ಕೇಂದ್ರ ರೈಲ್ವೇ ಸಚಿವ ಲಾಲು ಪ್ರಸಾದ್ ಯಾದವ್ ಅವರು ಶನಿವಾರ ಮಂಗಳೂರಿನಿಂದ ಹಸಿರು ನಿಶಾನೆ ತೋರಿಸಿದರು.
ಇದರೊಂದಿಗೆ ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಕನಸೊಂದು ಕೊನೆಗೂ ನನಸಾಯಿತು. ಸಮಾರಂಭದಲ್ಲಿ ರಾಜ್ಯಪಾಲ ರಾಮೇಶ್ವರ ಠಾಕೂರ್, ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ಆರ್.ವೇಲು, ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್, ಸಂಸದ ಜನಾರ್ದನ ಪೂಜಾರಿ, ವೀರಪ್ಪ ಮೊಯಿಲಿ, ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ, ಮಾಜಿ ಶಾಸಕಿ ಶೋಭಾ ಕರಂದ್ಲಾಜೆ ಮುಂತಾದವರು ಹಾಜರಿದ್ದರು.
ಈ ರೈಲಿಗಾಗಿ ಧರಣಿ, ಸತ್ಯಾಗ್ರಹ ಮುಂತಾಗಿ ಹಲವಾರು ಪ್ರತಿಭಟನೆಗಳು ನಡೆದಿದ್ದು, ಅದು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮೇಲಾಟಕ್ಕೂ ಕಾರಣವಾಗಿತ್ತು. ಸಮಾರಂಭದ ಸಂದರ್ಭದಲ್ಲೂ ಈ ಹೋರಾಟದ ಯಶಸ್ಸಿಗಾಗಿ ನಾನು-ತಾನು ಎಂದು ಉಭಯ ಪಕ್ಷಗಳ ಮೇಲಾಟ ಎದ್ದು ಕಾಣುತ್ತಿತ್ತು.
ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಸಮಾರಂಭದ ಮುಖ್ಯ ಅತಿಥಿಯಾಗಿದ್ದು, ಭದ್ರತಾ ಪಡೆಗಳು ಅವರಿಗೆ ಅಡ್ಡಿಯುಂಟು ಮಾಡಿರುವುದು ಬಿಜೆಪಿಯ ಕಣ್ಣು ಕೆರಳಿಸಿತ್ತು.
ಈ ಮಾರ್ಗದ ರೈಲು ಸಂಚಾರದಲ್ಲಿ ಪ್ರತಿನಿತ್ಯ 10,000 ಪ್ರಯಾಣಿಕರು ಪ್ರಯಾಣಿಸುವ ನಿರೀಕ್ಷೆ ಇದ್ದು, ರೈಲು ಸದ್ಯಕ್ಕೆ ಮೈಸೂರು ಸುತ್ತಿಕೊಂಡು ಬೆಂಗಳೂರಿಗೆ ತೆರಳುವುದು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆಯಾದರೂ, ಕನಿಷ್ಠ ಈ ಸೌಲಭ್ಯವಾದರೂ ಇದೆಯಲ್ಲ ಎಂಬ ತೃಪ್ತಿ ಇದೆ.
ಈಗಾಗಲೇ ಡಿ.16ರವರೆಗೆ ಟಿಕೆಟ್ ಮುಂಗಡ ಬುಕ್ಕಿಂಗ್ ಆಗಿದ್ದು ಮಂಗಳೂರು ಬೆಂಗಳೂರು ಪ್ರಯಾಣಿಗರ ಸಂಖ್ಯೆ ಮತ್ತೂ ಹೆಚ್ಚಾಗುವ ಸಾಧ್ಯತೆ ಇದೆ. ಸುಮಾರು 12 ಘಂಟೆಗಳ ಸುದೀರ್ಘ ಪ್ರಯಾಣದಲ್ಲಿ ಪ್ರಯಾಣಿಕನ ಸುವ್ಯವಸ್ಥೆಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
|