ಕೇಂದ್ರ ಸರ್ಕಾರ ಕೊಟ್ಟ ಹಣವನ್ನು ದುರುಪಯೋಗ ಮಾಡಿದ್ದೇನೆ ಎಂಬ ಕಾಂಗ್ರೆಸ್ ಆರೋಪ ನಿರಾಧಾರ. ಈ ಕುರಿತಂತೆ ರಾಜ್ಯಪಾಲರ ತನಿಖೆಗೆ ನಾನು ಸಿದ್ಧ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಭಾನುವಾರ ಇಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು, ಕಾಂಗ್ರೆಸಿಗರು ಹೇಳುವಂತೆ ರಾಜ್ಯದ ಅಭಿವೃದ್ದಿಗೆಂದು ಕೇಂದ್ರ ಸರಕಾರ ಕೊಟ್ಟ 15 ಸಾವಿರ ಕೋಟಿ ರೂ. ದುರ್ಬಳಕೆಯಾಗಿದೆ ಎಂಬುದು ಶುದ್ಧ ಸುಳ್ಳು. ಆರೋಪ ಮಾಡುವ ಮೊದಲು ಕೇಂದ್ರದ ಅನುದಾನ ಯಾವುದು ಎಂದು ತೋರಿಸಲಿ. ಇಡೀ ರಾಜ್ಯದ ವಾರ್ಷಿಕ ಬಜೆಟ್ಟೇ 54 ಸಾವಿರ ಕೋಟಿ ಇರುವಾಗ ಇನ್ನು ಕೇಂದ್ರ ಸರಕಾರ ಎಲ್ಲಿಂದ ಈ ಮಟ್ಟಿಗೆ ಅನುದಾನ ನೀಡುತ್ತದೆ ಎಂದು ಪ್ರಶ್ನಿಸಿದರು.
ವಿರೋಧ ಪಕ್ಷದಲ್ಲಿದ್ದಾಗ ಬೇಜವಾಬ್ದಾರಿಯಿಂದ ನಡೆದುಕೊಂಡ ಕಾಂಗ್ರೆಸಿನಿಂದ ಪಾಠ ಕಲಿಯಬೇಕಾದ ಅವಶ್ಯಕತೆ ನಮಗೇನೂ ಇಲ್ಲ. ಬರೀ ಸುಳ್ಳು ಹೇಳಿಕೊಂಡು ಜನರ ದಾರಿ ತಪ್ಪಿಸಲೆತ್ನಿಸುತ್ತಿರುವ ಅವರಿಗೆ ಜನರೇ ಬುದ್ಧಿ ಕಲಿಸುತ್ತಾರೆ. "ಅಲ್ಲಾ ಸ್ವಾಮಿ, ನಾವು ಶಾಲಾ ಮಕ್ಕಳಿಗೆ ಮುರಿದ ಸೈಕಲ್ ಕೊಟ್ಟಿದ್ದೇವೆಂದು ಹೇಳ್ತಾರಲ್ಲ, ತಾಕತ್ತಿದ್ದರೆ ನಾವು ವಿತರಿಸಿದ ಸೈಕಲುಗಳಲ್ಲಿ ಒಂದಾದರೂ ಮುರಿದ ಸೈಕಲು ತಂದು ತೋರಿಸಲಿ ನೋಡೋಣ. ಬರೀ ಬೊಗಳೆ ಬಿಟ್ಟುಕೊಂಡು ಬಾಯಿ ಚಪಲ ತೀರಿಸಿಕೊಳ್ಳೋಕೆ ಈ ರೀತಿ ಮಾತಾಡಿದ್ರೆ ಯಾರೂ ಓಟು ಹಾಕೋಲ್ಲ ಸ್ವಾಮಿ" ಎಂದು ಅವರು ನೇರವಾಗಿ ಆಕ್ಷೇಪಿಸಿದರು.
|