ಶ್ರೀ ಮಂಜುನಾಥ ಕ್ಷೇತ್ರ ಧರ್ಮಸ್ಥಳದಲ್ಲಿ ಜನಸಾಗರವೋ ಸಾಗರ. ಜಗಮಗಿಸೋ ದೀಪಗಳಲಂಕಾರ ಹಾಗೂ ಸಾಂಸ್ಕೃತಿಕ ಮೇಳದೊಂದಿಗೆ ಭಾನುವಾರ ಸಂಜೆ ಶ್ರೀ ಕ್ಷೇತ್ರದ ಅಮೃತವರ್ಷಿಣಿ ಸಭಾಮಂಟಪದಲ್ಲಿ ಡಿಸೆಂಬರ್ 5 ರಿಂದ ಶುರುವಾಗಿದ್ದ ಲಕ್ಷದೀಪೋತ್ಸವವು ಸಮಾರೋಪಗೊಂಡಿತು.
ಧರ್ಮಗಳ ನಡುವಣ ತಿಳಿವಳಿಕೆ ಇಂದಿನದಾಗಬೇಕು. ಶಾಂತಿ ನೆಮ್ಮದಿಯ ಬದುಕು ನಮ್ಮದಾಗಬೇಕು ಅದರಿಂದಲೇ ಜಗತ್ತಿನ ನಿರ್ಮಾಣ ಸಾಧ್ಯ ಎಂದು ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಭಾರತದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಹೇಳಿದರು.
ಭಾರತದ ಭವಿಷ್ಯವನ್ನು ರೂಪಿಸುವರು ಎಳೆಯರು. ಆದರೆ ಈ ಎಳೆಯರನ್ನು ಜವಾಬ್ದಾರಿಯುತ ಪ್ರಜೆಗಳನ್ನಾಗಿ ಬೆಳೆಸುವ ನಮ್ಮ ಜವಾಬ್ದಾರಿಯನ್ನು ನಾವು ಕಡೆಗಣಿಸಿದ್ದೇವೆ. ಮೊದಲು ನಾವು ಬದಲಾಗಬೇಕು, ನಮ್ಮ ಧೋರಣೆಗಳು ಬದಲಾಗಬೇಕು ಆಗ ಮಾತ್ರ ನಾವು ಅವರನ್ನು ಸರಿಯಾದ ದಾರಿಗೆ ತರಲು ಸಾಧ್ಯ ಎಂದು ಕಲಾಂ ಹೇಳಿದರು.
ಆರ್ಟ್ ಆಫ್ ಲಿವಿಂಗ್ನ ಶ್ರೀ ಶ್ರೀ ರವಿಶಂಕರ ಗುರೂಜಿಯವರು ಮಾತನಾಡಿ, ಲಕ್ಷದೀಪೋತ್ಸವವೆಂದರೆ ಲಕ್ಷ್ಯದೀಪೋತ್ಸವ, ಜೀವನದಲ್ಲಿ ಬೆಳಕಾಗಲು ಲಕ್ಷ್ಯವಿರಬೇಕು. ಸರ್ವಧರ್ಮದ ಅರಿವಿಲ್ಲದ ಕಾರಣದಿಂದಾಗಿಯೇ ಈ ದೇಶದ 212 ಜಿಲ್ಲೆಗಳಲ್ಲಿ ನಕ್ಸಲರು ಇಂದು ತಲೆ ಎತ್ತಿ ನಿಂತಿದ್ದಾರೆ. ಮೂಲಭೂತ ಸೌಕರ್ಯದ ಕೊರತೆ ಕೂಡ ಇದಕ್ಕೆ ಪೂರಕವಾಗಿದೆ ಎಂದು ಹೇಳಿದರು.
ಧರ್ಮಗಳು ಹಲವಿದ್ದರೂ ಅವುಗಳ ಮೂಲ ಸಿದ್ಧಾಂತ ಒಂದೇ ಆಗಿದೆ. ಅದನ್ನು ತಿಳಿದುಕೊಂಡರೆ ಮಾತ್ರ ಜೀವನ ಸಾಕಾರವಾದೀತು, ಸಾಮರಸ್ಯ ಮೂಡೀತು ಎಂದು ಅವರು ನುಡಿದರು.
ವೇದಿಕೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಎಸ್. ಪ್ರಭಾಕರ್, ಡಿ. ಸುರೇಂದ್ರ ಹೆಗ್ಗಡೆ ಮತ್ತಿತರು ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ರಾಷ್ಟ್ರಕವಿ ಡಾ. ಜಿ. ಎಸ್. ಶಿವರುದ್ರಪ್ಪನವರು ವಹಿಸಿದ್ದರು.
|