ಸೈಕಲ್ ಖರೀದಿಯಲ್ಲಿ ತಾವು ಹಸ್ತಕ್ಷೇಪ ಮಾಡಿಲ್ಲ. ಇದರಲ್ಲಿ ಅವ್ಯವಹಾರವೇನಾದರೂ ನಡೆದಿದ್ದರೆ ರಾಜ್ಯಪಾಲರು ಸಂಬಂಧಪಟ್ಟ ಕಡತಗಳನ್ನು ಪರೀಶೀಲಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯೊಂದರಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಕುರಿತು ತಮ್ಮ ಹೆಸರನ್ನು ಪ್ರಸ್ತಾಪಿಸಿದ್ದಕ್ಕೆ ಹೊರಟ್ಟಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಸೈಕಲ್ ಖರೀದಿಯ ಪ್ರಸ್ತಾಪವನ್ನು ತಾವು ಒಪ್ಪಿರಲಿಲ್ಲ ಹಾಗೂ ಯಾವುದೇ ಬಗೆಯ ಒತ್ತಡ, ಆಮಿಷಗಳಿಗೂ ತಾವು ಮಣಿದಿರಲಿಲ್ಲ ಎಂದೂ ಸಹ ಹೊರಟ್ಟಿಯವರು ಸ್ಪಷ್ಟೀಕರಣವನ್ನು ನೀಡಿದ್ದಾರೆ.
1950 ರೂಪಾಯಿಗಳಿಗೇ ಸೈಕಲ್ ಪೂರೈಸಲು ತಯಾರಕರು ಸಿದ್ಧರಿದ್ದರೂ ಹೆಚ್ಚಿನ ಬೆಲೆಗೆ ಖರೀದಿ ಮಾಡುತ್ತಿರುವುದರ ಬಗ್ಗೆ ಆಗಿನ ಶಾಸಕ ದಿನೇಶ್ ಗುಂಡೂರಾವ್ ಸದನದ ಗಮನ ಸೆಳೆದಾಗ ಈ ಕುರಿತು ತನಿಖೆ ನಡೆಸುವ ಬಗ್ಗೆಯೂ ತಾವು ಭರವಸೆ ನೀಡಿದ್ದಾಗಿ ಹೊರಟ್ಟಿಯವರು ತಿಳಿಸಿದ್ದಾರೆ.
|