ಮುಂಬರಲಿರುವ ಚುನಾವಣೆಯಲ್ಲಿ ಪಕ್ಷದ ಎಲ್ಲಾ ಮಾಜಿ ಶಾಸಕರಿಗೆ ಟಿಕೆಟ್ ನೀಡಲಾಗುವುದೆಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ತಿಳಿಸಿದ್ದಾರೆ.
ಪಕ್ಷದ ವಿರುದ್ಧ ಧ್ವನಿ ಎತ್ತಿರುವ ರಾಜಶೇಖರ ಮೂರ್ತಿಯವರು ಪಕ್ಷದಲ್ಲಿಯೇ ಇರುತ್ತಾರೆಂಬ ವಿಶ್ವಾಸ ತಮ್ಮದು. ಸದ್ಯದಲ್ಲಿಯೇ ಅವರೊಂದಿಗೆ ಸಮಾಲೋಚಿಸಿ ಬಿಕ್ಕಟ್ಟು ಶಮನಗೊಳಿಸಲಾಗುವುದೆಂದೂ ಗೌಡರು ತಿಳಿಸಿದ್ದಾರೆ.
ಚುನಾವಣೆ ಪ್ರಚಾರಕ್ಕಿಂತ ಸದ್ಯಕ್ಕೆ ಪಕ್ಷದ ಸಂಘಟನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಜನವರಿ 20ರಂದು ಪಕ್ಷದ ಸಮಾವೇಶವನ್ನು ನಡೆಸಲಾಗುವುದು. ಇದರ ನಂತರ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಾಗುವುದು ಎಂದು ಗೌಡರು ತಿಳಿಸಿದ್ದಾರೆ.
ತಿಪಟೂರಿನಲ್ಲಿ ನಡೆದ ಕೋಮುಗಲಭೆಗೆ ಕಾರಣರಾದವರ ವಿರುದ್ಧ ಕೂಡಲೇ ಶಿಸ್ತುಕ್ರಮ ಜರುಗಿಸುವಂತೆ ರಾಜ್ಯಪಾಲರು, ಪೊಲೀಸ್ ಮಹಾನಿರ್ದೇಶಕರು ಹಾಗೂ ಆ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದೂ ಸಹ ಅವರು ತಿಳಿಸಿದ್ದಾರೆ.
|