ಮಾತೃದೇವೋ ಭವ, ಪಿತೃ ದೇವೋ ಭವ, ಆಚಾರ್ಯ ದೇವೋ ಭವ ಎಂದು ಹೇಳುವ ಮೂಲಕ ಎಲ್ಲರಲ್ಲೂ ದೇವರನ್ನು ಕಾಣುವ ಉದಾತ್ತ ಚಿಂತನೆಗಳಿಗೆ ನಮ್ಮ ಸಂಸ್ಕ್ಕತಿ ಎಡೆಮಾಡಿಕೊಟ್ಟಿದೆ. ಇದು ಇಷ್ಟಕ್ಕೇ ನಿಲ್ಲುವುದಿಲ್ಲ; ಅತಿಥಿ ದೇವೋ ಭವ ಎಂದು ಹೇಳುವ ಮೂಲಕ ಈ ಉದಾತ್ತತೆಯನ್ನು ಉನ್ನತೀಕರಿಸಿಕೊಂಡಿದೆ.
ಅತಿಥಿಯೇ ದೇವರು ಎಂದ ಮೇಲೆ ಅವನಿಗೆ ನೀಡುವ ಆದರಾತಿಥ್ಯವೂ ಚೆನ್ನಾಗಿರಬೇಕಲ್ಲವೇ? ಈ ದೃಷ್ಟಿಯಿಂದ, ಸಾಹಿತ್ಯ ಸಮ್ಮೇಳನಕ್ಕೆ ಬರುವ ಅತಿಥಿಗಳಿಗೆ ರಸಕವಳವನ್ನೇ ಬಡಿಸಲು ಇಲ್ಲಿನ ಪಾಕಶಾಲೆಗಳು ಸರ್ವಸನ್ನದ್ಧಗೊಂಡಿವೆ.
ಕುಂಜಿಬೆಟ್ಟಿನ ಶಾರದಾ ನಿಲಯದ ಅವರಣದಲ್ಲಿ ಪಾಕಶಾಲೆ ನಿರ್ಮಾಣಗೊಂಡಿದ್ದು 4 ದಿನಗಳಲ್ಲಿ ನಾಲ್ಕು ಲಕ್ಷ ಮಂದಿಯ ಭೋಜನಕ್ಕೆ ಆಹಾರ ಸಿದ್ಧಪಡಿಸುವಷ್ಟು ಸಮರ್ಥವಾಗಿದೆ. ಭೋಜನಶಾಲೆಗಳಿಗೆ ದೇವರ ಹೆಸರನ್ನೂ, ಆಹಾರದ ಕೌಂಟರುಗಳಿಗೆ ಜಿಲ್ಲೆಯ ಮಹನೀಯರ ಹೆಸರುಗಳನ್ನೂ ಇಟ್ಟಿರುವುದು ಇಲ್ಲಿನ ವಿಶೇಷ. ಪ್ರತಿನಿಧಿಗಳು ಮತ್ತು ಸ್ವಯಂಸೇವಕರಿಗೆ 10 ಕೌಂಟರುಗಳಿದ್ದರೆ, ಸಾರ್ವಜನಿಕರಿಗಾಗಿ 30 ಕೌಂಟರುಗಳ ವ್ಯವಸ್ಥೆ ಮಾಡಲಾಗಿದೆ.
ಮೂರು ಲೋಡಷ್ಟು ಸೌದೆ, 20 ಸಾವಿರ ಲೀಟರ್ ಹಾಲು, 18 ಸಾವಿರ ಕೆಜಿಯಷ್ಟು ಅಕ್ಕಿಯನ್ನು ವ್ಯವಸ್ಥೆ ಮಾಡಲಾಗಿದೆ. ಇನ್ನುಳಿದಂತೆ ದ್ರಾಕ್ಷಿ, ಗೋಡಂಬಿ, ಸಕ್ಕರೆ, ಎಣ್ಣೆ, ವಿವಿಧ ಹಿಟ್ಟು-ಧಾನ್ಯ-ತರಕಾರಿಗಳ ಸಂಗ್ರಹವನ್ನು ಕಣ್ಣಿಂದಲೇ ನೋಡಿ ಆನಂದಿಸಬೇಕು. ಊಟ-ಉಪಾಹಾರಗಳಿಗೆ ಅಡಿಕೆಹಾಳೆಯನ್ನು ಬಳಸಲಿರುವುದು ಮತ್ತೊಂದು ವಿಶೇಷ.
ಸಾರ್ವಜನಿಕ ವಿಭಾಗದ ಕೌಂಟರ್ಗಳಲ್ಲಿ ಆಹಾರ ಪೂರೈಸಲು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 750 ಸ್ವಯಂಸೇವಕರು ಸಿದ್ಧರಾಗಿದ್ದು ಆತಿಥ್ಯಕ್ಕೆ ಹೆಸರಾದ ಊರು ಎಂಬ ಉಡುಪಿಯ ಹೆಸರನ್ನು ಸಾರ್ಥಕ್ಯಗೊಳಿಸಿದೆ.
|