ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕನ್ನಡದ ಪರ ದನಿ ಎತ್ತುವ ಸಮರ್ಥ ನಾಯಕನಿಲ್ಲ: ಎಲ್ಎಸ್ಎಸ್
ಯಗಟಿ ರಘು ನಾಡಿಗ್

ಶಿವರಾಮ ಕಾರಂತ ಮಹಾಮಂಟಪ; ಎಂ.ಗೋಪಾಲಕೃಷ್ಣ ಅಡಿಗ ಪ್ರಧಾನ ವೇದಿಕೆ; ಉಡುಪಿ: ಕರ್ನಾಟಕದ ನಾಯಕರೇ, ಕನ್ನಡಿಗರು ಭಾರತದಲ್ಲಿ ಎರಡನೆಯ ದರ್ಜೆಯ ಪ್ರಜೆಗಳಾಗುವಂತೆ ಮಾಡಬೇಡಿ. ಕನ್ನಡಿಗರೇ, ಭಾರತದಲ್ಲಿ ಎರಡನೆಯ ದರ್ಜೆಯ ನಾಗರಿಕರಾಗಲು ಒಪ್ಪಬೇಡಿ - ಇವು ಎಲ್.ಎಸ್.ಶೇಷಗಿರಿರಾಯರ ಮಾತುಗಳು.

ಸಾಮಾನ್ಯವಾಗಿ ಪ್ರತಿ ಬಾರಿ ಸಾಹಿತ್ಯ ಸಮ್ಮೇಳನವಾದಾಗಲೂ ಅದರಲ್ಲಿ ಅಧ್ಯಕ್ಷರ ಭಾಷಣ ಇದ್ದೇ ಇರುತ್ತದೆ. ಇದೆಯೆಂಬ ಕಾರಣಕ್ಕೆ ಕೆಲವರು ಭಾಷಣ ಮಾಡಿದರೆ, ಅಧ್ಯಕ್ಷರ ಭಾಷಣವೆಂಬ ಕಾರಣಕ್ಕೆ ಕೆಲವರು ಕಿವಿಗೊಡುತ್ತಾ ಬಂದಿದ್ದಾರೆ. ಆದರೆ ಫಲಿತ ಮಾತ್ರ ಸೊನ್ನೆ ಎಂಬುದು ಇದುವರೆಗೂ ಇದರ ಒಳಹೊರಗನ್ನು ಬಲ್ಲವರ ಅಭಿಪ್ರಾಯ. ಅದರೆ ತಣ್ಣನೆಯ ದನಿಯಲ್ಲಿಯೇ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಾ ಹೋದ ಎಲ್ಎಸ್ಎಸ್‌ರವರ ಕನ್ನಡ-ಕರ್ನಾಟಕದ ಕುರಿತಾದ ಕಾಳಜಿ ಎಲ್ಲರ ಮೆಚ್ಚುಗೆಯನ್ನು ಪಡೆಯಿತು.

ಉಡುಪಿಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣವನ್ನು ಮಾಡುತ್ತಿದ್ದ ಅವರು, ನಾನಾಡುತ್ತಿರುವುದು ಉದ್ವೇಗದ ಮಾತಲ್ಲ. ಕೇಂದ್ರ ಸರ್ಕಾರದಲ್ಲಿ 27 ಮಂದಿ ಸಂಪುಟ ದರ್ಜೆಯ ಸಚಿವರಿದ್ದಾರೆ. ಆದರೆ ಅವರಲ್ಲಿ ಒಬ್ಬರೂ ಕನ್ನಡಿಗರಿಲ್ಲ. ಕರ್ನಾಟಕಕ್ಕೆ ಸಂಬಂಧಪಟ್ಟ ವಿಷಯಗಳನ್ನು ಚರ್ಚಿಸುವಾಗ ಈ ರಾಜ್ಯದ ಪರ ದನಿ ಎತ್ತಲು ಒಬ್ಬನೂ ಕನ್ನಡಿಗನಿಲ್ಲ ಎಂದರೆ ಹೇಗೆ? ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದರು.

ಸುಮಾರು ಒಂದೂವರೆ ವರ್ಷದ ಹಿಂದೆ ಪ್ರಧಾನಿ ಮನಮೋಹನ್ಸಿಂಗ್ರವರು ಬೆಂಗಳೂರಿಗೆ ಬಂದಿದ್ದಾಗ ರಾಜಭವನದಲ್ಲಿ ನಡೆದ ಸಭೆಯಲ್ಲಿ ಡಾ.ಪಾಟೀಲ ಪುಟ್ಟಪ್ಪ, ಡಾ.ದೇ.ಜವರೇಗೌಡ, ಡಾ.ಎಂ.ಚಿದಾನಂದ ಮೂರ್ತಿ ಹಾಗೂ ತಾವು ಭಾಷಣ ಮಾಡಿದ್ದನ್ನು ಸ್ಮರಿಸಿಕೊಂಡ ಶೇಷಗಿರಿರಾವ್ರವರು, ಅಂದು ಕನ್ನಡಕ್ಕಾದ ಅನ್ಯಾಯವನ್ನು ವಿವರಿಸಿದರೂ ಯಾವುದೇ ಪ್ರಯೋಜನವಾಗಿಲ್ಲ; ಕೇಂದ್ರ ಸರ್ಕಾರ ನೇಮಿಸಿದ ತಜ್ಞರ ಸಭೆಯನ್ನೂ ಸಹ ಕರೆದಿಲ್ಲ ಎಂದು ನೊಂದುಕೊಂಡರು.

ಕನ್ನಡಕ್ಕೆ ಶಾಸ್ತ್ತ್ರೀಯ ಭಾಷೆಯ ಸ್ಥಾನಮಾನ ನೀಡುವುದರ ಕುರಿತು ಕಂಡುಬರುತ್ತಿರುವ ಅಸಡ್ಡೆಯ ಕುರಿತೂ ಎಲ್ಎಸ್ಎಸ್ ತಮ್ಮ ಅಸಮಾಧಾನವನ್ನು ತೋಡಿಕೊಂಡರು. ಕೇವಲ ಜನನಾಯಕರು ಮಾತ್ರವಲ್ಲದೇ ಕೆಲ ವಿದ್ವಾಂಸರೂ ಈ ಅಸಡ್ಡೆಗೆ ಕಾರಣರಾಗಿರುವುದರ ಕುರಿತು ಅವರು ಕೆರಳಿದಂತಿತ್ತು.

ಕೆಲವು ವಿದ್ವಾಂಸರು ಕನ್ನಡಕ್ಕೆ ಶಾಸ್ತ್ತ್ರೀಯ ಭಾಷೆಯ ಸ್ಥಾನಮಾನ ಲಭ್ಯವಾಗದಿದ್ದರೆ ಏನೂ ನಷ್ಟವಿಲ್ಲ ಎಂಬಂತೆ ಮಾತಾಡುತ್ತಿರುವುದು ನನಗೆ ಅಚ್ಚರಿಯುಂಟುಮಾಡಿದೆ. ಕೇವಲ ತಮಿಳು ಹಾಗೂ ಸಂಸ್ಕ್ಕತ ಭಾಷೆಗಳಿಗೆ ಮಾತ್ರ ಒಂದೂವರೆ ಸಾವಿರ ವರ್ಷಗಳ ಇತಿಹಾಸವಿದೆ ಎಂದು ಕೇಂದ್ರ ಸರ್ಕಾರವೂ ಹೇಳುತ್ತಿದೆ. ಇದು ಕನ್ನಡಕ್ಕಾದ ಅಪಚಾರ ಎನ್ನದೆ ವಿಧಿಯಿಲ್ಲ. ಇಷ್ಟು ಸಾಲದೆಂಬಂತೆ ತಮಿಳು ಭಾಷೆಯ ಬೆಳವಣಿಗೆಗೆಂದೇ ಮೈಸೂರಿನಲ್ಲಿ ಈಗಾಗಲೇ ಕಟ್ಟಡ ಸಿದ್ಧವಾಗಿದೆ ಇದನ್ನೆಲ್ಲಾ ನಾವು ಸಹಿಸಿಕೊಳ್ಳಬೇಕೆ? ಎಂದು ಎಲ್ಎಸ್ಎಸ್ ಪ್ರಶ್ನಿಸುವಾಗ ಸಮ್ಮೇಳನದಲ್ಲಿ ಸೇರಿದ್ದ ಸಮಸ್ತರಿಗೂ ಕನ್ನಡ ಭಾಷೆಯ ಕುರಿತಾದ ಅವರ ಕಾಳಜಿ ಮನವರಿಕೆಯಾಗಿದ್ದು ಸುಳ್ಳಲ್ಲ.

ಗಡಿನಾಡಿನ ಸಮಸ್ಯೆಯ ಕುರಿತು ಕರ್ನಾಟಕದ ಪರ ವಾದವನ್ನು ಸಮರ್ಥವಾಗಿ ಮಂಡಿಸಲು ಸಂಬಂಧಪಟ್ಟವರಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕೆಂಬ ಕಳಕಳಿಯ ಮಾತುಗಳನ್ನು ತಮ್ಮ ಭಾಷಣದಲ್ಲಿ ಸೇರಿಸಲು ಎಲ್ಎಸ್ಎಸ್ ಮರೆಯಲಿಲ್ಲ.
ಮತ್ತಷ್ಟು
ಉಡುಪಿ ಸಾಹಿತ್ಯ ಸಮ್ಮೇಳನ : ಒಂದಷ್ಟು ವಿಶೇಷತೆಗಳು
ಸಂಭ್ರಮದ ಸಮ್ಮೇಳನಕ್ಕೆ ವಿಧ್ಯುಕ್ತ ಧ್ವಜಾರೋಹಣ
ಸಮ್ಮೇಳನಕ್ಕೆ ನಿಸಾರ್ ಗೈರುಹಾಜರು
ಕನ್ನಡದ ನುಡಿಜಾತ್ರೆಗೆ ಅದ್ದೂರಿಯ ಚಾಲನೆ
ದುರ್ದೈವಿಗಳ ಕುಟುಂಬಕ್ಕೆ ರಾಜ್ಯಪಾಲರಿಂದ ಪರಿಹಾರ ಘೋಷಣೆ
ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ : ಯಶವಂತ್ ಸಿನ್ಹಾ