ಯಗಟಿ ರಘು ನಾಡಿಗ್
ಶಿವರಾಮ ಕಾರಂತ ಮಹಾಮಂಟಪ; ಎಂ.ಗೋಪಾಲಕೃಷ್ಣ ಅಡಿಗ ಪ್ರಧಾನ ವೇದಿಕೆ; ಉಡುಪಿ: ರೈಲು ಬಂಡಿಗಳ ಮೇಲೆ ತಮಿಳು ಅಕ್ಷರಗಳನ್ನು ಬರೆದರೆ ಪರವಾಗಿಲ್ಲ; ಆದರೆ ಕನ್ನಡದ ಅಕ್ಷರಗಳನ್ನು ಬರೆದರೆ ಮೈಲಿಗೆಯಾಗುತ್ತದೆ ಎಂದು ಕೇಂದ್ರ ರೈಲು ಸಚಿವರು ಭಾವಿಸಿದ್ದಾರೋ ಏನೋ.......!!
ಭಾವುಕರಾಗಿ ಅಧ್ಯಕ್ಷೀಯ ಭಾಷಣ ಮಾಡುತ್ತಿದ್ದ ಎಲ್.ಎಸ್.ಶೇಷಗಿರಿರಾಯರು ಕೊಂಚ ವ್ಯಂಗ್ಯಭರಿತ ಶೈಲಿಯಲ್ಲಿ ಹೀಗೆ ನೋವನ್ನು ತೋಡಿಕೊಂಡಾಗ ಸಭಾಂಗಣದಲ್ಲಿ ಸೇರಿದ್ದ ಸಾಹಿತ್ಯಾಭಿಮಾನಿಗಳೂ ಒಂದು ಕ್ಷಣ ಆ ವ್ಯಂಗ್ಯಕ್ಕೆ ತಮ್ಮ ಉದ್ಗಾರಗಳನ್ನೂ ಬೆರೆಸಿದ್ದು ಸುಳ್ಳಲ್ಲ.
ವಿವಿಧ ವಲಯಗಳಲ್ಲಿ, ವಿವಿಧ ವಿಷಯಗಳಲ್ಲಿ ಬಹಳ ಕಾಲದಿಂದಲೂ ಕನ್ನಡಕ್ಕೆ, ಕರ್ನಾಟಕಕ್ಕೆ ಆದ-ಅಗುತ್ತಿರುವ ಅನ್ಯಾಯಗಳನ್ನು ವಿವರಿಸುವಾಗ ಕೆಲವೊಮ್ಮೆ ಭಾವುಕರಾಗಿ, ಕೆಲವೊಮ್ಮೆ ಲಘು ಹಾಸ್ಯದ ಲೇಪವನ್ನು ಅದಕ್ಕೆ ನೀಡುತ್ತಿದ್ದರು ಎಲ್ಎಸ್ಎಸ್.
ಹೈದರಾಬಾದ್ ಕರ್ನಾಟಕದ ರೈಲುಮಾರ್ಗಗಳನ್ನು ನೈರುತ್ಯ ರೈಲ್ವೆ ವಲಯದ ವ್ಯಾಪ್ತಿಯಿಂದ ಹೊರಗಿಟ್ಟಿರುವುದೇಕೋ ತಿಳಿಯದು. ರಾಯಚೂರು, ಗುಲ್ಬರ್ಗಾ ಜಿಲ್ಲೆಗಳಲ್ಲಿ ರೈಲ್ವೆ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದರೆ ಮುಂಬಯಿ ಹಾಗೂ ಸಿಕಂದರಾಬಾದ್ ವಲಯಗಳತ್ತ ನೋಡಬೇಕಾದ ಸ್ಥಿತಿ ಒದಗಿಬಂದಿದೆ. ಇನ್ನು ಬೆಂಗಳೂರು-ಮಂಗಳೂರು ರೈಲುಮಾರ್ಗದ ದುರ್ಗತಿಯನ್ನು ಹೇಳುವುದೇ ಬೇಕಿಲ್ಲ. ರಾಜ್ಯದ ರಾಜಧಾನಿಯಿಂದ ಕರಾವಳಿ ಪ್ರದೇಶಕ್ಕೆ ರೈಲು ಸಂಚಾರವಿಲ್ಲದ ಏಕೈಕ ರಾಜ್ಯ ಕರ್ನಾಟಕ ಎಂಬ ಅಂಶವೊಂದೇ ಸಾಕು ಇದನ್ನು ವಿವರಿಸಲುಷಿ ಎಂದು ಎಲ್ಎಸ್ಎಸ್ ಹೇಳುವಾಗ ಕನ್ನಡಿಗರಿಗಾಗುತ್ತಿರುವ ಅನ್ಯಾಯದ ಕುರಿತು ಎಲ್ಲರಿಗೂ ಅರಿವು ಮೂಡಿದ್ದು ಸುಳ್ಳಲ್ಲ.
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗಿನಿಂದಲೂ ಕೇಂದ್ರ ಸರ್ಕಾರವು ಸಾಕಷ್ಟು ಅಂಚೆಚೀಟಿಗಳನ್ನು ಹೊರತಂದಿದೆ. ಅದರೆ ಇದರಲ್ಲಿ ಕರ್ನಾಟಕದ-ಕನ್ನಡಿಗರ ಕುರಿತು ಬಂದಿರುವ ಅಂಚೆ ಚೀಟಿಗಳೆಷ್ಟು ಎಂದು ಎಲ್ಎಸ್ಎಸ್ ಪ್ರಶ್ನಿಸಿದಾಗ ಎಲ್ಲರೂ ಒಂದರೆಕ್ಷಣ ನೆನಪಿಸಿಕೊಳ್ಳಲು ಯತ್ನಿಸಿದ್ದು ವಿಶೇಷವಾಗಿತ್ತು. ಬಿ.ಡಿ.ಜತ್ತಿಯವರನ್ನು ಬಿಟ್ಟು ಎಲ್ಲ ಉಪರಾಷ್ಟ್ತ್ರಪತಿಗಳ ಅಂಚೆಚೀಟಿಗಳೂ ಬಂದಿವೆ. ವೇಮನ, ತಿರುವಳ್ಳುವರ್ ಅಂಚೆಚೀಟಿಗಳು ಬಂದಿವೆ, ಅದರೆ ಸರ್ವಜ್ಞನದು ಮಾತ್ರ ಇಲ್ಲ. ತಮಿಳುನಾಡಿನ ಐವರು ಮುಖ್ಯಮಂತ್ರಿಗಳು ಅಂಚೆಚೀಟಿಯಲ್ಲಿ ಮುಖ ತೋರಿಸಿದ್ದಾರೆ; ಅದರೆ ಕರ್ನಾಟಕದ ಎಸ್.ನಿಜಲಿಂಗಪ್ಪನವರಿಗೆ ಮಾತ್ರ ಈ ಭಾಗ್ಯ ಸಿಕ್ಕಿದೆ ಎಂದು ಅಂಕಿ-ಅಂಶಗಳ ಸಮೇತ ಕನ್ನಡಿಗರಿಗಾಗಿರುವ ಅನ್ಯಾಯವನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು ಅಧ್ಯಕ್ಷ ಎಲ್.ಎಸ್.ಶೇಷಗಿರಿರಾವ್.
ಈಗಾಗಲೇ ಅಂಕೋಲ ಸತ್ಯಾಗ್ರಹ, ವಿದುರಾಶ್ವತ್ಥ ಹೋರಾಟ, ಕಾಗೋಡು ಸತ್ಯಾಗ್ರಹ, ಗೋಕಾಕ್ ಚಳವಳಿಗಳು ನಡೆದಿವೆ. ಈ ಮೇಲ್ಕಂಡ ಅಸಮಾನತೆ-ಅನ್ಯಾಯಗಳನ್ನೆಲ್ಲ ನೋಡಿದರೆ ಮತ್ತೊಂದು ಉಗ್ರ ಹೋರಾಟವನ್ನು ಕನ್ನಡಿಗರು ಪ್ರಾರಂಭಿಸಬೇಕಾಗುತ್ತದೆಯೇ ಎಂಬ ಪ್ರಶ್ನೆ ಮೂಡುತ್ತದೆ ಎಂದು ಎಲ್ಎಸ್ಎಸ್ ಹೇಳಿದಾಗ ಹೌದಲ್ಲಾ? ಎಂಬ ಭಾವ ಮೂಡಿತ್ತು ಎಲ್ಲ ಸಾಹಿತ್ಯ ಪ್ರೇಮಿಗಳ ಮನದಲ್ಲಿ
|