ಶಕ್ತಿಶಾಲಿಯಾಗಿದ್ದ ಸಂಯುಕ್ತ ಜನತಾ ದಳದಲ್ಲಿದ್ದ ಇಟ್ಟಿಗೆಗಳನ್ನು ಕಿತ್ತು ತಂದು ಜೆಡಿಎಸ್ ಕೋಟೆ ಕಟ್ಟಲು ಹೋಗಿದ್ದಕ್ಕೆ ಈಗ ದಂಡ ತೆರಬೇಕಾಗಿದೆ ಎಂದು ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.
ನಗರದ ಭಾರತೀಯ ವಿದ್ಯಾಭವನದಲ್ಲಿ ಆಯೋಜಿಸಲಾಗಿದ್ದ "ಕರ್ನಾಟಕ ರಾಜಕೀಯ - ಪ್ರಸ್ತುತ ಸ್ಥಿತಿಗತಿ ಒಂದು ಸಾಂದರ್ಭಿಕ ಚರ್ಚೆ" ಎಂಬ ಸಂವಾದದಲ್ಲಿ ಅವರು ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಈಗ ರಾಜಕೀಯ ಅಸ್ಥಿರತೆ ನಿರ್ಮಾಣವಾಗಿದೆ ಎಂದು ಯಾರಿಗಾದರೂ ಅನಿಸಿದರೆ ಅದಕ್ಕೆ ನಾನೇ ಮೂಲಕಾರಣ. ಆ ಕುರಿತಾದ ತಪ್ಪಿತಸ್ಥ ಭಾವನೆ ನನ್ನನ್ನು ತೀವ್ರವಾಗಿ ಕಾಡುತ್ತಿದೆ. ಈ ತಪ್ಪಿಗಾಗಿ ಜನ ನನ್ನನ್ನು ಕ್ಷಮಿಸಬೇಕು ಎಂದು ಹೇಳಿದ ಸಿಂಧ್ಯಾ, ಗೌಡರ ಕುಟುಂಬದಿಂದ ಈಗಾಗಲೇ ಮಕ್ಮಲ್ ಟೋಪಿ ಹಾಕಿಸಿಕೊಂಡಿದ್ದೇವೆ. ಮತ್ತೆ ಅಂತಹ ವಾತಾವರಣ ನಿರ್ಮಾಣವಾಗದಂತೆ ಎಚ್ಚರವಹಿಸಬೇಕಿದೆ ಎಂದು ನುಡಿದರು.
ಈಗಾಗಲೇ ಸಾಕಷ್ಟು ದೂರ ಬಂದಿರುವ ನಾವು ವಿವಿಧ ಪಕ್ಷಗಳನ್ನು ಸೇರುವ ತೀರ್ಮಾನ ತೆಗೆದುಕೊಂಡಿದ್ದೇವೆ. ಅತ್ಯಂತ ಸಮಯೋಚಿತ ನಿರ್ಧಾರಗಳನ್ನು ಕೈಗೊಳ್ಳುವುದರ ಮೂಲಕ ನಮ್ಮನ್ನೆಲ್ಲ ಸರಿದಾರಿಯಲ್ಲಿ ಕೊಂಡೊಯ್ಯಬೇಕಾದ ಹೊಣೆಗಾರಿಕೆ ಹಿರಿಯ ನಾಯಕರಾದ ಎಂ.ಪಿ.ಪ್ರಕಾಶ್ ಮೇಲಿದೆ ಎಂದು ಸಿಂಧ್ಯಾ ಅಭಿಪ್ರಾಯಪಟ್ಟರು.
|