ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇನ್ನೂ ಯಾಕ ಬರಲಿಲ್ಲಾ ಪುಸ್ತಕ ಓದೋಂವಾ..!! ಪುಸ್ತಕ ಕೊಳ್ಳೋಂವಾ..?!!
ಯಗಟಿ ರಘು ನಾಡಿಗ್

ಶಿವರಾಮ ಕಾರಂತ ಮಹಾಮಂಟಪ; ಉಡುಪಿ: ವಿದ್ಯುನ್ಮಾನ ಮಾಧ್ಯಮಗಳ ಭರಾಟೆಯಲ್ಲಿ ಕನ್ನಡ ಓದುಗ ಕಳೆದುಹೋಗುತ್ತಿದ್ದಾನೆಯೇ? ಸಾಹಿತ್ಯ ಸಮ್ಮೇಳನದಲ್ಲಿ ಆಯೋಜಿಸಲಾಗಿರುವ ಪುಸ್ತಕ ಮಾರಾಟದ ಪ್ರಮಾಣವನ್ನು ಅವಲೋಕಿಸಿದಾಗ ಕಂಡುಬಂದ ಆತಂಕವಿದು.

ಪ್ರತಿ ಬಾರಿ ಸಾಹಿತ್ಯ ಸಮ್ಮೇಳನವಾದಾಗಲೂ ಅಲ್ಲಿನ ಊಟೋಪಚಾರದ ವ್ಯವಸ್ಥೆ ಹಾಗೂ ಪುಸ್ತಕ ಮಾರಾಟ ವ್ಯವಸ್ಥೆಯ ಕಡೆಗೆ ಎಲ್ಲರ ಕುತೂಹಲವಿದ್ದೇ ಇರುತ್ತದೆ. ಕ್ರಮವಾಗಿ ಬಾಯಿ ಚಪಲಿಗರು ಹಾಗೂ ಪುಸ್ತಕ ಚಪಲಿಗರು ಇಲ್ಲಿ ಲಗ್ಗೆ ಹಾಕುವುದೇ ಇದಕ್ಕೆ ಕಾರಣ ಎಂಬುದು ತಮಾಷೆಗೆ ಹೇಳುವ ಮಾತಾದರೂ ಅದೊಂದು ಅನುಮಾನಿತ ಸತ್ಯ ಎಂಬ ಮಾತಂತೂ ಸುಳ್ಳಲ್ಲ..!!

ಆಹಾರದ ಕೌಂಟರ್‌ಗಳ ಕಡೆಗೇನೋ ಯಾರನ್ನೂ ಕರೆಯುವುದೇ ಬೇಕಿಲ್ಲ, ಸಮ್ಮೇಳನಕ್ಕೆ ಬಂದವರೇ ಅಲ್ಲಿಗೆ ಲಗ್ಗೆ ಹಾಕುತ್ತಾರೆ. ಆದರೆ ಸಾಹಿತ್ಯ ಸಮ್ಮೇಳನ ತಮ್ಮ ಪುಸ್ತಕ ಪ್ರಕಾಶನ ಕೃಷಿಗೆ ಪೂರಕವಾಗಬಲ್ಲದು ಎಂದು ಬಯಸಿ ಮಳಿಗೆಗಳನ್ನು ಹಾಕಿದವರು ಕೊಳ್ಳುವವರನ್ನು ಎದಿರುನೋಡಲೇಬೇಕಾಗುತ್ತದೆ. ನೀರೀಕ್ಷಿತ ಪ್ರೋತ್ಸಾಹ ಸಿಗದಿದ್ದಾಗ ನಿರಾಶೆ ಸಹಜವಲ್ಲವೇ?

ಕರ್ನಾಟಕದಲ್ಲಿ ಇರುವ ಬಹಳಷ್ಟು ಮಂದಿ ಪುಸ್ತಕ ಪ್ರಕಾಶಕರಲ್ಲಿ ಇದರಿಂದ ಬರುವ ಆದಾಯವನ್ನೇ ನೆಚ್ಚಿಕೊಂಡವರೂ ಇದ್ದಾರೆ, ಪ್ರಕಾಶನವನ್ನು ಉಪವೃತ್ತಿಯನ್ನಾಗಿ ಮಾಡಿಕೊಂಡವರೂ ಇದ್ದಾರೆ. ಇದರೊಂದಿಗೆ ಮತ್ತೊಂದು ವಲಯವಿದೆ. ಪುಸ್ತಕದ ಲೇಖಕ ಯಾರು? ಬರಹದ ಗುಣಮಟ್ಟವೇನು? ಎಂಬ ಯಾವ ಅಂಶವನ್ನೂ ನೋಡದೆ ಸುಮ್ಮನೇ ಗ್ರಂಥಾಲಯಗಳಿಗೆ ತುಂಬುವ ವರ್ಗ ಅದು.

ಆದರೆ ಕನ್ನಡ ಸಾಹಿತ್ಯ ಸಮ್ಮೇಳನದಂತಹ ಮಹತ್ವಾಕಾಂಕ್ಷೀ ಸನ್ನಿವೇಶದಲ್ಲಿ ವೈಚಾರಿಕತೆಗೆ ಇಂಬುಕೊಡುವಂತಹ ಅಥವಾ ವಿಮರ್ಶಾ ಪ್ರಜ್ಞೆಯನ್ನು ಬೆಳೆಸುವಂತಹ ಪುಸ್ತಕಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ ಎಂದೇ ನಂಬಲಾಗಿತ್ತು. ಕಳೆದ ಬಾರಿ ಶಿವಮೊಗ್ಗದಲ್ಲಿ ಸಾಹಿತ್ಯ ಸಮ್ಮೇಳನ ನಡೆದಾಗ ಮೊದಲ ದಿನವೇ ಪುಸ್ತಕಗಳ ಬಂಪರ್ ಮಾರಾಟವಾಗಿದ್ದುದನ್ನು ಗಮನದಲ್ಲಿರಿಕೊಂಡು ಈ ಅಂದಾಜು ಮಾಡಲಾಗಿತ್ತು. ಅದರೆ ಓದುಗರಿಂದ ಹೇಳಿಕೊಳ್ಳುವಂತಹ ಪ್ರತಿಕ್ರಿಯೆ ಬಾರದೆ ಪುಸ್ತಕ ಪ್ರಕಾಶಕರು ಕೊಂಚ ನಿರಾಶರಾಗಿರುವುದಂತೂ ನಿಜ.

ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಹೋದಾಗ ಪುಸ್ತಕ ಮಳಿಗೆಗಳಿಗೆ ಸಮರ್ಪಕ ವ್ಯವಸ್ಥೆ ಮಾಡದಿರುವುದೂ ಒಂದು ಕಾರಣ ಎಂದು ಕಂಡು ಬಂತು. ಬಹುತೇಕ ಪ್ರಕಾಶಕರೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಈ ಅಭಿಪ್ರಾಯಕ್ಕೆ ಇಂಬುಕೊಡುವಂತಿತ್ತು. ಒಂದು ಮಳಿಗೆ ಒಂಡು ಕಡೆ ಇದ್ದರೆ ಮತ್ತೊಂದನ್ನು ಹುಡುಕಿಕೊಂಡು ಎಲ್ಲಿಗೋ ಹೋಗಬೇಕು. ಇವುಗಳ ಮಧ್ಯೆ ಮಧ್ಯೆ ಬ್ಯಾಂಕು, ಕರಕುಶಲ ವಸ್ತುಗಳ ಸ್ಟಾಲ್‌ಗಳಿರುವುದರಿಂದ ಪುಸ್ತಕ ಖರೀದಿಗೆಂದೇ ಬರುವವರು ಅಡಚಣೆ ಎದುರಿಸುತ್ತಿರುವುದಂತೂ ನಿಜ.

ಎಲ್ಲರನ್ನೂ ಎಲ್ಲಕಾಲದಲ್ಲೂ ಎಲ್ಲ ವಿಷಯಗಳಲ್ಲೂ ತೃಪ್ತಿಪಡಿಸಲು ಸಾಧ್ಯವಿಲ್ಲ. ಅದರೆ ಸಾಹಿತ್ಯ ಜನರನ್ನು ತಲುಪಬೇಕು ಎಂಬ ಉದ್ದೇಶದೊಂದಿಗೆ ಆಯೋಜಿಸಲಾಗುವ ಪುಸ್ತಕ ಮಾರಾಟಕ್ಕೇ ಸಮರ್ಪಕ ವ್ಯವಸ್ಥೆಯಾಗಲಿಲ್ಲವೆಂದರೆ ಸಮ್ಮೇಳನದ ಉದ್ದೇಶ ವಿಫಲವಾದಂತೆ ಅಲ್ಲವೇ? ಎಂದು ಅಲ್ಲಿ ಸೇರಿದ್ದ ಕೆಲ ಸಾಹಿತ್ಯಾಭಿಮಾನಿಗಳು ನಮ್ಮನ್ನು ಕೇಳಿದಾಗ ಹೌದಲ್ವಾ? ಅನ್ನಿಸಿದ್ದು ನಿಜ.
ಮತ್ತಷ್ಟು
ಸಮ್ಮೆಳನ : ಇಂದಿನ ವಿಶೇಷ ಗೋಷ್ಠಿಗಳು
ಸಮ್ಮೇಳನದಲ್ಲಿಂದು ಜಾಗತೀಕರಣ ಗೋಷ್ಠಿ
ರಾಜಕೀಯ ಅಸ್ಥಿರತೆಗೆ ನಾನೇ ಕಾರಣ: ಸಿಂಧ್ಯಾ
14 ಶಾಸಕರ ಗುಡ್‌ಬೈ: ದಳ ಈಗ ಮತ್ತೊಮ್ಮೆ ವಿದಳ
ವಿವಿಗಳ ಗುಣಮಟ್ಟ ಸುಧಾರಣೆಗೆ ಸಮ್ಮೇಳನಾಧ್ಯಕ್ಷರ ಸಲಹೆ
ಅನ್ಯಾಯದ ವಿರುದ್ಧ ಕನ್ನಡಿಗರು ಮತ್ತೊಂದು ಹೋರಾಟ ಮಾಡಬೇಕೇ?: ಎಲ್ಎಸ್ಎಸ್ ಅಸಮಾಧಾನ