ಬಂಡಾಯ ನಾಯಕ ಹಾಗೂ ಮಾಜಿ ಸಚಿವ ಎಂ.ಪಿ.ಪ್ರಕಾಶ್ ಸೇರಿದಂತೆ ಕೆಲ ಮಾಜಿ ಶಾಸಕರು ಜೆಡಿಎಸ್ ತ್ಯಜಿಸಿರುವುದರಿಂದ ಪಕ್ಷದ ಮೇಲೆ ಏನೂ ಪರಿಣಾಮವಾಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಪ್ರಕಾಶ್ ಅವರ ಬಗ್ಗೆ ನನಗೆ ಗೌರವವಿದೆ. ಅವರನ್ನು ಉಳಿಸಿಕೊಳ್ಳಲು ಬಹಳ ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಅವರಿಗೆ ಒಳ್ಳೆಯದಾಗಲಿ ಎಂದು ಹೇಳಿದರು.ಜನತಾ ಪರಿವಾರದ ಪಕ್ಷಗಳು ಮೊದಲಿನಿಂದಲೂ ವಿದಳನ ಹೊಂದುತ್ತಲೇ ಇದ್ದರೂ ಅದರಿಂದ ಏನೂ ವ್ಯತಿರಿಕ್ತ ಪರಿಣಾಮ ಉಂಟಾಗಿಲ್ಲ.
ಆದ್ದರಿಂದ ಪ್ರಕಾಶ್ ಮತ್ತವರ ಬೆಂಬಲಿಗರು ಪಕ್ಷ ಬಿಡುವುದರಿಂದ ಜೆಡಿಎಸ್ಗೆ ಹಾನಿಯಾಗುತ್ತದೆ ಎಂದು ತಾವೇನೂ ಭಾವಿಸಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ತಮ್ಮನ್ನು ಸಗಣಿಗೆ ಹೋಲಿಸಿರುವುದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿಯವರು, ಅಪವಿತ್ರಗೊಂಡಿರುವ ಸ್ಥಳಗಳನ್ನು ಪವಿತ್ರಗೊಳಿಸಲು ಹಾಗೂ ಕ್ರಿಮಿಕೀಟಗಳು ಬಾರದಂತೆ ಶುದ್ದೀಕರಿಸಲು ಸಗಣಿಯನ್ನು ಬಳಸುತ್ತಾರೆ ಎಂಬ ವಿಷಯ ಸಿಂಧ್ಯಾರಿಗೆ ತಿಳಿದಂತಿಲ್ಲ ಎಂದು ವ್ಯಂಗ್ಯವಾಡಿದರು.
|