ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಬೇಕು ಎಂಬ ಕೂಗಿಗೆ ತನ್ನ ದನಿಯನ್ನೂ ಸೇರಿಸುವುದಾಗಿ ಮಾಜಿ ಮುಖ್ಯಮಂತ್ರಿ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಎಂ.ವೀರಪ್ಪ ಮೊಯಿಲಿ ತಿಳಿಸಿದ್ದಾರೆ. ಇಲ್ಲಿ ನಡೆಯುತ್ತಿರುವ 74 ನೇ ಸಾಹಿತ್ಯ ಸಮ್ಮೇಳನದಲ್ಲಿನ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಹಿರಿಯ ವಿದ್ವಾಂಸರುಗಳಾದ ಎಂ.ಚಿದಾನಂದ ಮೂರ್ತಿ, ಎಲ್.ಎಸ್.ಶೇಷಗಿರಿರಾವ್ ಮೊದಲಾದವರನ್ನು ಒಳಗೊಂಡ ಸಮಿತಿಯು ನೀಡಿರುವ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ. ಈ ಕುರಿತು ಮೈಸೂರಿನ ಭಾಷಾಶಾಸ್ತ್ರ ಕೇಂದ್ರದ ಸಿಂಗ್ ಅವರೂ ಸಕಾರಾತ್ಮಕ ಅಭಿಪ್ರಾಯವನ್ನೇ ವ್ಯಕ್ತಪಡಿಸಿದ್ದಾರೆ. ಇದು ಕನ್ನಡ ಭಾಷೆಗೆ ಅವಶ್ಯಕವಾಗಿ ಸಿಗಲೇಬೇಕಾದ ಹಕ್ಕು ಎಂದು ಈ ಸಂದರ್ಭದಲ್ಲಿ ಮೊಯಿಲಿ ತಿಳಿಸಿದರು.
ಕರ್ನಾಟಕದಲ್ಲಿನ ಸಾಹಿತಿಗಳು, ರಾಜಕಾರಣಿಗಳು ಹಾಗೂ ಧಾರ್ಮಿಕ ವ್ಯಕ್ತಿಗಳು ಪ್ರತ್ಯೇಕ ದಿಕ್ಕುಗಳಲ್ಲಿ ಹೋಗುವುದನ್ನು ಬಿಟ್ಟು ಒಂದೇ ದಿಕ್ಕಿನಲ್ಲಿ ನಡೆಯುವಂತಾದರೆ ಒಳ್ಳೆಯದು ಎಂಬ ಕಳಕಳಿಯನ್ನು ಮೊಯ್ಲಿ ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.
|