ನನ್ನಿಂದಾಗಿ ಯಾವುದೇ ಹಗರಣ ನಡೆದಿದ್ದರೆ ಲೋಕಾಯುಕ್ತರಿಗೋ, ರಾಷ್ಟ್ರಪತಿಯವರಿಗೋ ದೂರು ಕೊಡುವ ಬದಲು ಸುಮ್ಮನೆ ಆರೋಪ ಮಾಡುತ್ತಾ ಕೂರಬೇಡಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರಿಗೆ ಸವಾಲು ಹಾಕಿದ್ದಾರೆ.
ತಮ್ಮ 49ನೇ ಹುಟ್ಟುಹುಬ್ಬ ಸಂಭ್ರಮಾಚರಣೆಯ ನಂತರ ಪಕ್ಷದ ಕಚೇರಿಯಲ್ಲಿ ಮಾತನಾಡುತ್ತಿದ್ದ ಅವರು, ನನ್ನ ಅಧಿಕಾರಾವಧಿಯ ಹಗರಣಗಳನ್ನು ಪತ್ತೆ ಹಚ್ಚಲು ಐವರು ಸದಸ್ಯರ ಸಮಿತಿ ರಚಿಸುವುದಾಗಿ ಕಾಂಗ್ರೆಸ್ ಹೇಳಿಕೊಂಡಿದೆ. ಇದನ್ನು ಸ್ವಾಗತಿಸುವೆ. ರಾಜಕೀಯದಲ್ಲಿ ನನಗಿಂತ ಅನುಭವ ಹೊಂದಿರುವ ಕಾಂಗ್ರೆಸ್ಸಿಗರಿಗೆ ರಾಜ್ಯಪಾಲರ ಆಡಳಿತದಲ್ಲಿ ಈ ಮಾಹಿತಿಗಳನ್ನು ಹೊರತೆಗೆಯುವುದೇನೂ ಕಷ್ಟವಾಗಲಿಕ್ಕಿಲ್ಲ ಎಂದು ವ್ಯಂಗ್ಯವಾಡಿದರು.
ಸಾರ್ವಜನಿಕ ಸಭೆ-ಸಮಾರಂಭಗಳನ್ನು ಮಾಡಿದರೆ ಜನ ನಮಗೆ ಹೊಡೆಯುತ್ತಾರೆ ಎಂದು ಕೇಂದ್ರ ಮಾಜಿ ಸಚಿವ ಅನಂತ್ ಕುಮಾರ್ ಹೇಳಿರುವುದು ನನ್ನ ಅರಿವಿಗೆ ಬಂದಿದೆ. ಸದ್ಯದಲ್ಲಿಯೇ ಜೆಡಿಎಸ್ ಮುಖಂಡರ ತಂಡ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದೆ. ಆಗ ನಮಗೂ ಜನ ಬೆಂಬಲ ಇದೆಯೋ ಇಲ್ಲವೋ ಎಂಬುದು ಗೊತ್ತಾಗುತ್ತದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಇಂಧನ, ನಗರಾಭಿವೃದ್ಧಿ, ಗಣಿ ಇಲಾಖೆಗಳಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆರೋಪಿಸಿದ್ದಾರೆ. ಹಾಗಿದ್ದ ಮೇಲೆ ಇಷ್ಟೊಂದು ಭ್ರಷ್ಟಾಚಾರ ಮಾಡಿದ್ದ ಪಕ್ಷದ ಬೆಂಬಲ ಪಡೆದು ಮುಖ್ಯಮಂತ್ರಿಯಾಗಲು ಹಾತೊರೆದದ್ದು ಏಕೆ? ಎಂದು ಕುಮಾರಸ್ವಾಮಿ ಯಡಿಯೂರಪ್ಪನವರನ್ನು ಗೇಲಿ ಮಾಡಿದರು.
|