ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರಕಿಸಿಕೊಡುವುದಕ್ಕೆ ಸಂಬಂಧಿಸಿ ತಾವು ರಾಜ್ಯಸಭೆಯಲ್ಲಿ ಹಲವು ಬಾರಿ ಮಾತನಾಡಿರುವುದು ಪತ್ರಿಕೆಗಳಲ್ಲೂ ವರದಿಯಾಗಿದೆ. ಆದರೆ ಏನೂ ಮಾಡುತ್ತಿಲ್ಲ ಎಂಬ ಟೀಕೆ ಮಾಡಿದ್ದು ತಪ್ಪು ಎಂದು ರಾಜ್ಯಸಭಾ ಸದಸ್ಯ ಜನಾರ್ದನ ಪೂಜಾರಿ ಖಂಡಿಸಿದ್ದಾರೆ.
ರಾಜ್ಯಪಾಲರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಶಾಸ್ತ್ರೀಯ ಭಾಷೆ ಸ್ಥಾನಮಾನ ದೊರಕಿಸಿಕೊಡುವುದಕ್ಕೆ ಸಂಬಂಧಿಸಿ ಸಂಸದರು ಚಕಾರ ಎತ್ತುತ್ತಿಲ್ಲ ಎಂದು ಸಮ್ಮೇಳನದ ವೇದಿಕೆಯಲ್ಲಿ ಟೀಕೆ ಮಾಡಿರುವುದು ನೋಡಿದರೆ ಇವರು ಪತ್ರಿಕೆಗಳನ್ನೇ ಓದುತ್ತಿಲ್ಲ ಎಂದು ಭಾವಿಸಬೇಕಾಗುತ್ತದೆ ಎಂದು ಟೀಕಿಸಿದರು.
ಇದಕ್ಕೆ ಸಂಬಧಿಸಿ ಸಮ್ಮೇಳನದಲ್ಲಿ ಕಾಂಗ್ರೆಸ್ ಮುಖಂಡರನ್ನು ಘೇರಾವ್ ಮಾಡಿದ್ದಾರೆ. ಈ ಹೋರಾಟಗಾರರು ಬಿಜೆಪಿ ಸಂಸದರನ್ನೇಕೆ ಪ್ರಶ್ನೆ ಮಾಡಲಿಲ್ಲ? ಎಂದು ಕೇಳಿದ ಪೂಜಾರಿಯವರು, ಸಾಹಿತ್ಯ ಸಮ್ಮೇಳನವನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುವುದು ಅತ್ಯಂತ ದುರ್ದೈವದ ಸಂಗತಿ ಎಂದು ವಿಷಾದಿಸಿದರು.
ರಾಜ್ಯವು ಈಗ ಎದುರಿಸುತ್ತಿರುವ ಹಲವು ಹನ್ನೊಂದು ಸಮಸ್ಯೆಗಳ ಕುರಿತು ರಾಜ್ಯಪಾಲರಿಗೆ ವಿವರಣೆ ನಿಡಲಾಗಿದ್ದು, ಈ ಕುರಿತು ಕ್ರಮ ಕೈಗೊಳ್ಳುವಂತೆ ಅವರಿಗೆ ಮನವಿ ಮಾಡಲಾಗಿದೆ ಎಂದೂ ಸಹ ಪೂಜಾರಿಯವರು ನುಡಿದರು.
|