ಮುಂಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹುಣಸೂರಿನಿಂದ ಟಿಕೆಟ್ ಕೊಡಬೇಕು ಎಂದು ಕಾಂಗ್ರೆಸ್ ಕಟ್ಟುವ ಬನ್ನಿಷ ಜನಾಂದೋಲನ ವೇದಿಕೆ ಸೋನಿಯಾ ಗಾಂಧಿಯವರಿಗೆ ಆಗ್ರಹಿಸಿದೆ.
ವೇದಿಕೆಯ ಅಧ್ಯಕ್ಷ ಬಿ.ಜಿ.ನಾಯಕ್ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸುರವರು ಸ್ಪರ್ಧಿಸಿ ಗೆಲುವು ಸಾಧಿಸಿದ ಈ ಕ್ಷೇತ್ರ ಸತತವಾಗಿ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಆದರೆ ಇದೀಗ ಕಾಂಗ್ರೆಸ್ ನಾಯಕರ ನಡುವಿನ ಕಿತ್ತಾಟದಿಂದ ದುರ್ಬಲಗೊಂಡಿದೆ. ದೇವರಾಜ ಅರಸರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡಿರುವ ಸಿದ್ದರಾಮಯ್ಯನವರಿಗೆ ಇಲ್ಲಿಂದ ಸ್ಪರ್ಧಿಸುವಂತೆ ಅನುವು ಮಾಡಿಕೊಡುವುದೇ ಅದಕ್ಕಿರುವ ಪರಿಹಾರ ಎಂದು ಅಭಿಪ್ರಾಯಪಟ್ಟರು.
ರಾಜ್ಯದ ರಾಜಕೀಯ ವಾತಾವರಣವು ಕಾಂಗ್ರೆಸ್ ಪಕ್ಷಕ್ಕೆ ಅನುಕೂಲಕರವಾಗಿದೆ. ಆದ್ದರಿಂದ ಈ ಸಂದರ್ಭದಲ್ಲಿ ಕೆಪಿಸಿಸಿ ನಾಯಕತ್ವ ಬದಲಾವಣೆ ಸೂಕ್ತವಲ್ಲ. ಹಾಗೇನಾದರೂ ಆದಲ್ಲಿ ಬಹುಜನ ಪಕ್ಷಕ್ಕೆ ನಾವಾಗಿಯೇ ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ ಎಂದು ನಾಯಕ್ ತಿಳಿಸಿದರು.
ವೇದಿಕೆಯ ಸಂಚಾಲಕ ಹರಿಹರ ಆನಂದಸ್ವಾಮಿ, ಮಹಾಪ್ರಧಾನ ಕಾರ್ಯದರ್ಶಿ ಎಸ್.ಶ್ರೀಕಾಂತ್, ರಾಜ್ಯ ಹಿಂದುಳಿದ ವರ್ಗಗಳ ಕ್ಷೇಮಾಭಿವೃದ್ದಿ ಸಂಘದ ಸಂಚಾಲಕ ಕೆ.ಎಸ್.ಶಿವರಾಮು ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
|