ಲೋಕಾಯುಕ್ತರಿಗೆ ಪರಮಾಧಿಕಾರ ನೀಡುವ ಮಸೂದೆಯನ್ನು ಅಂಕಿತ ಹಾಕದೆ ವಾಪಸ್ ಕಳಿಸಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಲೋಕಾಯುಕ್ತರಿಗೆ ಪರಮಾಧಿಕಾರ ನೀಡುವ ಮಸೂದೆಯ ವ್ಯಾಪ್ತಿಯಲ್ಲಿ ರಾಜಕಾರಣಿಗಳನ್ನು ತರಲು ಉದ್ದೇಶಿಸಿದ್ದೆ, ಆದರೆ ಸಾಧ್ಯವಾಗಿರಲಿಲ್ಲ.
ಮುಂದೆ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿಯೂ ಸೇರಿದಂತೆ ಎಲ್ಲ ರಾಜಕಾರಣಿಗಳನ್ನೂ ಲೋಕಾಯುಕ್ತದ ವ್ಯಾಪ್ತಿಗೆ ತರಲು ಇಚ್ಛಿಸಿರುವುದಾಗಿ ತಿಳಿಸಿದರು. ದುಡ್ಡಿನ ಅಹಂಕಾರದಿಂದ ಇಲ್ಲಸಲ್ಲದ ಆರೋಪ ಮಾಡುತ್ತಿರುವ ವಿಧಾನ ಪರಿಷತ್ ಸದಸ್ಯ ಜನಾರ್ದನರೆಡ್ಡಿ ಗಣಿ ಲಂಚದ ಕುರಿತಾದ ದಾಖಲೆಗಳನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ ಕುಮಾರಸ್ವಾಮಿ ರಾಜ್ಯದಲ್ಲಿ ಮತ್ತೆ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಈಗಾಗಲೇ ಜೆಡಿಎಸ್ ಪರ ಅಲೆ ಎದ್ದಿದೆ. ಇದರೊಂದಿಗೆ ಪಕ್ಷವನ್ನು ಇನ್ನಷ್ಟು ಸಂಘಟಿಸಿ ಪಕ್ಷದ ಶಕ್ತಿಯನ್ನು ತೋರಿಸಲು ಈ ತಿಂಗಳು ರಾಜ್ಯದ ವಿವಿಧ ಭಾಗಗಳಲ್ಲಿ ಸಮಾವೇಶಗಳನ್ನು ನಡೆಸಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದರು.
|