ಈ ತಿಂಗಳ 21ರಂದು ನಡೆಯಲಿರುವ ದತ್ತ ಜಯಂತಿಯ ಹಿನ್ನೆಲೆಯಲ್ಲಿ ಬಾಬಾ ಬುಡನ್‌ಗಿರಿಯಲ್ಲಿ ದತ್ತಮಾಲೆ ಅಭಿಯಾನ ಮತ್ತು ಶೋಭಾಯಾತ್ರೆಗೆ ಅವಕಾಶ ಕೊಡಬಾರದು ಎಂದು ಕೋಮುಸೌಹಾರ್ದ ವೇದಿಕೆ ಆಗ್ರಹಿಸಿದೆ.
ಯಥಾಸ್ಥಿತಿ ಕಾಪಾಡಬೇಕು ಎಂದು ನ್ಯಾಯಾಲಯದ ತೀರ್ಪಿನಲ್ಲಿ ಆದೇಶವಿದ್ದರೂ ಅದನ್ನು ಉಲ್ಲಂಘಿಸಿ ಬಿಜೆಪಿ ಹಾಗೂ ಆರ್ಎಸ್ಎಸ್ ಸಂಘಟನೆಗಳು ಡಿ.21ರಿಂದ 23ರವರೆಗೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಿವೆ. ಇದಕ್ಕೆ ಅವಕಾಶ ಕೊಡದೆ 1975ರ ಪೂರ್ವದ ಯಥಾಸ್ಥಿತಿ ಕಾಪಾಡಬೇಕು ಎಂದು ವೇದಿಕೆ ಆಗ್ರಹಿಸಿದೆ.
ಈ ಹಿನ್ನೆಲೆಯಲ್ಲಿ ಕೋಮುಸೌಹಾರ್ದ ವೇದಿಕೆ ನಾಳೆ (19) ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ವೇದಿಕೆಯ ರಾಜ್ಯ ಕಾರ್ಯದರ್ಶಿ ಕೆ.ಎಲ್.ಅಶೋಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಶೋಭಾಯಾತ್ರೆ ಸಮಯದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಹಾಗೂ ರಾಜ್ಯದ ನೆಮ್ಮದಿ ಹಾಳುಮಾಡುವಂತೆ ಕೋಮು ಪ್ರಚೋದಕ ಭಾಷಣ ಮಾಡುವ ಬಿಜೆಪಿ ಸಂಸದ ಅನಂತ್‌ಕುಮಾರ್, ಮಾಜಿ ಶಾಸಕರಾದ ಸಿ.ಟಿ.ರವಿ, ಸುನೀಲ್‌ಕುಮಾರ್, ಬಜರಂಗದಳದ ಮಹೇಂದ್ರಕುಮಾರ್ ಹಾಗೂ ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಇವರುಗಳನ್ನು ಗಡಿಪಾರು ಮಾಡಬೇಕು ಎಂದೂ ಅಶೋಕ ಆಗ್ರಹಿಸಿದರು.
|