ಗರುಡನ ಆಕಾರದಲ್ಲಿರುವ ಮದ್ಯದ ಬಾಟಲಿಯನ್ನು ನೀವು ನೋಡಿರಬಹುದು. ಅದರೆ ಮದ್ಯದ ಬಾಟಲಿಯೊಳಗೆ ಗರುಡನ ವೈರಿಯಾದ ಸರ್ಪ ಇರುವುದನ್ನು ಎಲ್ಲಾದರೂ ಕೇಳಿದ್ದೀರಾ? ಬೆಂಗಳೂರಿನ ಬಾರ್ ಒಂದು ಈ ಬಗೆಯ ಸುದ್ದಿಗೆ ಕಾರಣವಾಗಿದೆ.
ಬೆಂಗಳೂರಿನ ರೆಸಿಡೆನ್ಸಿ ರಸ್ತೆಯ ನಿಕ್ಸ್ ಎಲೈಟ್ ಬಾರ್‌ಗೆ ಕಳೆದ ಶನಿವಾರ ದಾಳಿ ನಡೆಸಿದ್ದ ಅರಣ್ಯಾಧಿಕಾರಿಗಳು ಕಾಳಿಂಗ ಸರ್ಪದ ಮರಿಯನ್ನು ಒಳಗೊಂಡ ವಿಸ್ಕಿ ಬಾಟಲಿಯೊಂದನ್ನು ವಶಪಡಿಸಿಕೊಂಡಿದ್ದರು. ಆದರೆ ಇದು ನಿಜವಾದ ಕಾಳಿಂಗ ಸರ್ಪವಲ್ಲ, ಪ್ಲಾಸ್ಟಿಕ್ ಹಾವು ಎಂದು ಬಾರ್‌ನ ಮಾಲೀಕ ಸಮಜಾಯಿಷಿ ನೀಡಿದ್ದರು.
ಈಗ ಪರೀಕ್ಷಿಸಲಾಗಿ ಅದು ನಿಜವಾದ ಕಾಳಿಂಗ ಸರ್ಪದ ಮರಿ ಎಂದು ಗೊತ್ತಾಗಿದೆ. ಜೊತೆಗೆ ಅದರ ಬಾಲ ಹಾಗೂ ತಲೆಯ ಮೇಲೆ ಗಾಯದ ಗುರುತಿರುವುದು ಪರೀಕ್ಷೆಯಿಂದ ತಿಳಿದುಬಂದಿದೆ. ಈ ರೀತಿ 5 ವರ್ಷಗಳವರೆಗೆ ಸರ್ಪದ ಮರಿಯನ್ನಿರಿಸಿರುವ ಬಾಟಲಿಯಲ್ಲಿನ ಮದ್ಯವನ್ನು ಸೇವಿಸಿದರೆ ಮಾಮೂಲಿ ಮದ್ಯಕ್ಕಿಂತ ಸಾವಿರ ಪಟ್ಟು ಹೆಚ್ಚು ಕಿಕ್ ನೀಡುತ್ತದೆ ಎಂಬುದೊಂದು ನಂಬಿಕೆ ಮದಿರಾ ಪ್ರಿಯರಲ್ಲಿ ಚಾಲ್ತಿಯಲ್ಲಿದೆ. ಹಾಗಾಗಿಯೇ ಸಾಮಾನ್ಯ ಮದ್ಯಕ್ಕಿಂತ ಹಲವು ಪಟ್ಟು ಹೆಚ್ಚು ದರವನ್ನು ಇದಕ್ಕೆ ವಿಧಿಸಲಾಗುತ್ತದೆ.
ಸಾಕಷ್ಟು ರೌಂಡ್ ಮದ್ಯವನ್ನು ಸೇವಿಸಿದ ನಂತರ ಕೊನೆಯ ಪೆಗ್ ಆಗಿ ಈ ಮದ್ಯವನ್ನು ಸೇವಿಸುವುದು ವಾಡಿಕೆ. ಆದರೆ ಕಾಳಿಂಗ ಸರ್ಪದ ಮರಿ ಇರುವ ವಿಸ್ಕಿ ಎಂದು ಸುಳ್ಳು ಹೇಳಿ ಬಾರ್‌ನವರು ಮಾಮೂಲಿ ವಿಸ್ಕಿಯನ್ನೇ ಗಿರಾಕಿಗಳಿಗೆ ನೀಡುತ್ತಿದ್ದರು ಮತ್ತು ಹಲವು ಪಟ್ಟು ಹೆಚ್ಚು ಬೆಲೆ ವಿಧಿಸುತ್ತಿದ್ದರು ಎಂಬ ಅಂಶವೂ ಹೊರಬಿದ್ದಿದೆ.
ಈಗಾಗಲೇ ಪ್ರಕರಣ ದಾಖಲಾಗಿದ್ದು, ಮದ್ಯದ ಬಾಟಲಿಯಲ್ಲಿದ್ದ ಕಾಳಿಂಗ ಸರ್ಪ ಸ್ವದೇಶದ್ದೇ ಅಥವಾ ವಿದೇಶದ್ದೇ, ಮದ್ಯದಲ್ಲಿ ಡ್ರಗ್ಸ್ ಏನಾದರೂ ಇತ್ತೇ ಎಂಬುದರ ಬಗ್ಗೆ ಕೂಡಾ ಪರೀಕ್ಷೆ ಅಗಬೇಕಿದೆ. ಒಂದು ವೇಳೆ ಕಾಳಿಂಗ ಸರ್ಪ ವಿದೇಶದ್ದು ಎಂದು ತನಿಖೆಯಿಂದ ಗೊತ್ತಾದರೆ ಹಾಗೂ ಡ್ರಗ್ಸ್ ಇರುವ ಅಂಶ ಪತ್ತೆಯಾದರೆ, ಶಿಕ್ಷೆಯ ಪ್ರಮಾಣವೂ ಹೆಚ್ಚಾಗುತ್ತದೆ ಎಂದು ತಿಳಿದುಬಂದಿದೆ.
|