ರಾಜ್ಯಾದ್ಯಂತ ನಡೆದಿರಬಹುದಾದ ಅಕ್ರಮ ಗಣಿಗಾರಿಕೆ ಕುರಿತು ಉಪಗ್ರಹ ಆಧಾರಿತ ಸಮೀಕ್ಷೆ ನಡೆದಿದ್ದು ಚುನಾವಣೆಯ ನಂತರ ವರದಿ ಸಲ್ಲಿಸುವುದಾಗಿ ಲೋಕಾಯುಕ್ತ ಸಂತೋಷ್ ಹೆಗಡೆ ತಿಳಿಸಿದ್ದಾರೆ.
ಬಳ್ಳಾರಿ, ತುಮಕೂರು ಜಿಲ್ಲೆ ಸೇರಿದಂತೆ ರಾಜ್ಯದ ಹಲವೆಡೆಯ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿ ಈಗ ಲೀಸ್ ಆಧಾರದಲ್ಲಿ ಯಾರಿಗೆ ಜಮೀನು ನೀಡಲಾಗಿದೆ ಎಂಬ ಕುರಿತು ಈಗಾಗಲೇ ವರದಿ ಸಿದ್ಧವಾಗಿದೆ.
ಈಗಾಗಲೇ ಬೆಂಗಳೂರು ಸುತ್ತಮುತ್ತಲ ಭೂಕಬಳಿಕೆ ಕುರಿತು ಎ.ಟಿ.ರಾಮಸ್ವಾಮಿಯವರು ನೀಡಿದ ವರದಿಗೆ ವಿ.ಎಸ್.ಉಗ್ರಪ್ಪನವರೂ ಸೇರಿದಂತೆ ಹಲವರು ರೋಷಾವೇಶದಿಂದ ಪ್ರತಿಕ್ರಿಯಿಸಿರುವುದು ಸಂತೋಷ್ ಹೆಗಡೆಯವರ ನೆನಪಿನಲ್ಲಿದೆ. ಈಗಲೇ ವರದಿ ಸಲ್ಲಿಸಿದರೆ ತಮ್ಮ ಮೇಲೆ ಆಪಾದನೆಗಳು ಬರಬಹುದು ಎಂಬ ಲೆಕ್ಕಾಚಾರವನ್ನೂ ಅವರು ಹೊಂದಿದ್ದಾರೆ. ಆದ್ದರಿಂದ ವರದಿ ಸಲ್ಲಿಸಿ ರಾಜಕೀಯ ಧುರೀಣರ ಕೆಂಗಣ್ಣಿಗೆ ಗುರಿಯಾಗುವುದರ ಬದಲು ಚುನಾವಣೆಯ ನಂತರವೇ ಸಲ್ಲಿಸುವುದು ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿದೆ
|