ತುಮಕೂರಿನ ಸಿದ್ಧಗಂಗಾ ಮಠದ ಶ್ರೀಗಳೂ ಸೇರಿದಂತೆ ವೀರಶೈವ ಸ್ವಾಮಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ವಿರುದ್ಧ ನಗರದ ಎ.ಸಿ.ಎಂ.ಎಂ ನ್ಯಾಯಾಲಯದಲ್ಲಿ ಕ್ರಿಮಿನಲ್ ದೂರು ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಶೀವೀರಶೈವ ಮಠಾಧೀಶರು ರಾಜಕೀಯದಲ್ಲಿ ತಲೆ ಹಾಕಬಾರದು, ರಾಜ್ಯ ರಾಜಕೀಯ ವಲಯದಲ್ಲಿ ಪ್ರಭಾವ ಬೀರಲು ಯತ್ನಿಸಬಾರದು, ಇದು ನನ್ನ ಕೊನೆಯ ಎಚ್ಚರಿಕೆಷಿ ಎಂಬರ್ಥದ ಮಾತುಗಳನ್ನು ಕುಮಾರಸ್ವಾಮಿ ಆಡಿದ್ದರು ಎಂದು ಮಾಧ್ಯಮಗಳಲ್ಲಿ ಈ ಹಿಂದೆ ವರದಿಯಾಗಿತ್ತು. ಈ ಹೇಳಿಕೆಯ ವಿರುದ್ಧ ಈಗ ದೂರು ದಾಖಲಾಗಿದೆ.
ಅಮೃತೇಶ್ ಎಂಬ ವಕೀಲರು ಈ ದೂರು ದಾಖಲಿಸಿರುವುದಲ್ಲದೆ ಕುಮಾರಸ್ವಾಮಿ ವಿರುದ್ಧ ದೂರು ದಾಖಲಿಸಿಕೊಳ್ಳಲು ಹೈಗ್ರೌಂಡ್ಸ್ ಪೊಲೀಸರು ನಿರಾಕರಿಸಿದರೆಂದು ಅವರ ವಿರುದ್ಧವೂ ತನಿಖೆ ನಡೆಸಬೇಕೆಂದು ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ ಎಂದು ಸುದ್ದಿಮೂಲಗಳು ತಿಳಿಸಿವೆ.
ನಡೆದಾಡುವ ದೇವರೆಂದೇ ಹೆಸರಾದ ಸಿದ್ದಗಂಗಾ ಶ್ರೀಗಳ ಕುರಿತಾದ ಕುಮಾರಸ್ವಾಮಿಯವರ ಅವಹೇಳನಕಾರಿ ಹೇಳಿಕೆಯಿಂದ ಜನರ ಧಾರ್ಮಿಕ ಭಾವನೆಗಳಿಗೆ ಕುಂದುಂಟಾಗಿದೆ. ಆದ ಕಾರಣ ಅವರನ್ನು ನ್ಯಾಯಾಲಯಕ್ಕೆ ಕರೆಸಲು ಸಮನ್ಸ್ ಜಾರಿ ಮಾಡಬೇಕು. ಭಾರತೀಯ ದಂಡಸಂಹಿತೆಯಡಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಮೃತೇಶ್ ಕೋರಿದ್ದಾರೆ ಎಂದು ತಿಳಿದುಬಂದಿದೆ.
|