ಇಂದು ವೈಕುಂಠ ಏಕಾದಶಿ. ಇಂದು ವಿಷ್ಣುರೂಪಿ ಭಗವಂತನ ದರ್ಶನ ಮಾಡಿದರೆ ಮುಕ್ತಿ ಪ್ರಾಪ್ತಿ ಎಂಬುದು ಆಸ್ತಿಕ ಗಣದ ನಂಬಿಕೆ. ನಗರದ ವಿವಿಧ ಬಡಾವಣೆಗಳ ವೆಂಕಟೇಶ್ವರ ದೇವಾಲಯದ ಮುಂದಿದ್ದ ಭಕ್ತರ ಸಾಲು ಈ ನಂಬಿಕೆಗೆ ಇಂಬುಕೊಡುವಂತಿತ್ತು.
ಬೆಂಗಳೂರಿನಲ್ಲೀಗ ಮೂರ್ನಾಲ್ಕು ದಿನಗಳಿಂದಲೂ ಚುಮುಚುಮು ಚಳಿ, ಜೊತೆಗೆ ತುಂತುರು ಮಳೆಯ ಸಿಂಚನ ಬೇರೆ. ಬೆಚ್ಚಗೆ ಹೊದ್ದು ಮಲಗುವಂತೆ ಪ್ರೇರೇಪಿಸುವ ಈ ಚಳಿಯ ಮುಂದೆ ಭಕ್ತಿ ಪರಾಕಾಷ್ಠತೆಯನ್ನು ಮುಟ್ಟಿತ್ತು ಎಂದೇ ಹೇಳಬಹುದಾಗಿತ್ತು. ಏಕೆಂದರೆ ಶ್ರೀನಗರ, ಬನಶಂಕರಿ ಎರಡನೇ ಹಂತ, ಕೋಟೆ ದೇವಸ್ಥಾನ, ಮಹಾಲಕ್ಷ್ಮಿ ಲೇ ಔಟ್ ಇವೇ ಮೊದಲಾದ ಬಡಾವಣೆಗಳಲ್ಲಿನ ದೇವಾಲಯಗಳ ಮುಂದೆ ಬೆಳಗ್ಗೆ ನಾಲ್ಕುಗಂಟೆಯಿಂದಲೇ ಆಸ್ತಿಕ ಮಹಾಶಯರ ಸರತಿ ಸಾಲನ್ನು ಕಾಣಬಹುದಿತ್ತು. ಅಲ್ಲಿ ಮಕ್ಕಳು-ಹಿರಿಯರೆನ್ನುವ ಭೇದ ಭಾವವಿರಲಿಲ್ಲ.
ವೆಂಕಟೇಶ ದೇವಾಲಯಗಳಲ್ಲಿ ವಿಶೇಷ ಅಲಂಕಾರ, ಪೂಜೆ-ಪುನಸ್ಕಾರ, ಪ್ರಸಾದ ವಿತರಣೆ, ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣೆ, ರಾಜಬೀದಿ ಉತ್ಸವಗಳು ಜರುಗಿದವು. ಇನ್ನು ಕೆಲವು ದೇವಾಲಯಗಳಲ್ಲಂತೂ ಭಜನೆ, ನೃತ್ಯ, ಕೀರ್ತನೆ, ಸಂಗೀತಗಳೂ ಸಂಗಮಿಸಿ ಇಡೀ ವಾತಾವರಣಕ್ಕೆ ಒಂದು ಸಾಂಸ್ಕ್ಕತಿಕ-ದೈವಿಕ ಪ್ರಭೆಯನ್ನು ತಂದುಕೊಟ್ಟಿದ್ದವು.
ಒಟ್ಟಿನಲ್ಲಿ ವಿವಿಧತೆಯಲ್ಲಿ ಏಕತೆ ಎಂಬ ಮಾತಿಗೆ ಬೆಂಗಳೂರಿನ ಕೆಲ ದೇವಾಲಯಗಳಲ್ಲಿ ಸೇರಿದ್ದ ಭಕ್ತಗಣ ಸಾಕ್ಷಿಯಾಯಿತು.
|