ತುಮಕೂರಿನ ಸಿದ್ಧಗಂಗಾ ಶ್ರೀಗಳೂ ಸೇರಿದಂತೆ ಹಲವು ಮಠಾಧೀಶರ ಕುರಿತು ಜೆಡಿಎಸ್ ನಾಯಕರು ನೀಡಿರುವರೆನ್ನಲಾದ ಹೇಳಿಕೆಯ ವಿವಾದವನ್ನು ಮತ್ತಷ್ಟು ಬೆಳೆಸುವುದು ಉಚಿತವಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ದೆಹಲಿಯಲ್ಲಿ ಪಕ್ಷದ ವರಿಷ್ಠರೊಂದಿಗೆ ಸಮಾಲೋಚನೆ ನಡೆಸಿ ನಿನ್ನೆ ಬೆಂಗಳೂರಿಗೆ ಮರಳಿದ ಅವರು ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಮಠಾಧೀಶರ ಕುರಿತಾದ ಹೇಳಿಕೆ ಸಹಜವಾಗಿಯೇ ವೀರಶೈವ ಸಮುದಾಯದಲ್ಲಿ ಸಿಟ್ಟು ತರಿಸಿರಬಹುದು. ಹೇಳಿಕೆ ಕುರಿತು ನಾನೂ ಖಂಡಿಸಿದ್ದೇನೆ. ಆದರೆ ಇದನ್ನು ಹೀಗೆಯೇ ಮುಂದುವರಿಸದೆ ಕೈಬಿಡುವುದು ಸೂಕ್ತ ಎಂದು ನನ್ನ ಭಾವನೆ ಎಂದು ಯಡಿಯೂರಪ್ಪ ತಿಳಿಸಿದರು.
ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳ ಚುನಾವಣಾ ಫಲಿತಾಂಶ ಹೊರಬಂದ ಮೇಲೆ ರಾಜ್ಯದ ರಾಜಕೀಯದಲ್ಲಿ ಮಹತ್ತರ ಬದಲಾವಣೆಯಾಗಲಿದೆ. ಆದ್ದರಿಂದ ಮುಂಬರಲಿರುವ ಚುನಾವಣೆಯಲ್ಲಿ ಹೊಸ ಮುಖಗಳಿಗೆ ಅವಕಾಶ ಕೊಡುವ ಬಗ್ಗೆ ಸದಾನಂದ ಗೌಡರೊಂದಿಗೆ ಸಮಾಲೋಚಿಸಿದ್ದೇನೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
|