ಯೋಗಮಾಂತ್ರಿಕ ಎಂದೇ ಹೆಸರಾಗಿರುವ ರಾಮ್ದೇವ್ಜಿಯವರ ವಿಶಿಷ್ಟ ಯೋಗ ಶಿಬಿರ ಇದೇ ತಿಂಗಳ 25ರಿಂದ 30ರವರೆಗೆ ನಡೆಯಲಿದ್ದು ಅದಕ್ಕಾಗಿ ಸಿದ್ಧತೆಗಳು ಚುರುಕಾಗಿ ನಡೆಯುತ್ತಿವೆ.
ಈ ಶಿಬಿರದಲ್ಲಿ 8 ಸಾವಿರ ಜನ ಪಾಲ್ಗೊಳ್ಳಬಹುದೆಂದು ಅಂದಾಜಿಸಲಾಗಿದ್ದು, ಈಗಾಗಲೇ 4 ಸಾವಿರ ಮಂದಿ ಪ್ರವೇಶಪತ್ರ ಪಡೆದುಕೊಂಡಿದ್ದಾರೆ ಎಂದು ಯೋಗ ವಿಜ್ಞಾನ ಶಿಬಿರ ಸಮಿತಿ ಅಧ್ಯಕ್ಷ ಹಾಗೂ ವಿಆರ್ಎಲ್ ಲಾಜಿಸ್ಟಿಕ್ಸ್ ಚೇರ್ಮನ್ ವಿಜಯ ಸಂಕೇಶ್ವರ ತಿಳಿಸಿದ್ದಾರೆ.
ಈ ಶಿಬಿರಕ್ಕೆ 50 ಲಕ್ಷ ರೂ.ಗಳು ಖರ್ಚಾಗಬಹುದೆಂದು ಅಂದಾಜಿಸಲಾಗಿದ್ದು ಇದರ ಅರ್ಧಕ್ಕೂ ಹೆಚ್ಚು ಮೊತ್ತವನ್ನು ವಿಆರ್ಎಲ್ ಲಾಜಿಸ್ಟಿಕ್ಸ್ ಸಂಸ್ಥೆ ಭರಿಸಲಿದೆ. ಯೋಗದ ಜೊತೆಗೆ ಪ್ರಾಣಾಯಾಮಕ್ಕೆ ಒತ್ತು ನೀಡುವ ಈ ಶಿಬಿರದಲ್ಲಿ ಸಾಮಾನ್ಯ ಆಹಾರ ಸೇವಿಸಿಯೂ ಹೇಗೆ ಆರೋಗ್ಯ ವರ್ಧಿಸಿಕೊಳ್ಳಬಹುದೆಂಬುದರ ಕುರಿತು ಮಾಹಿತಿ ನೀಡಲಾಗುವುದು ಎಂದು ತಿಳಿದುಬಂದಿದೆ.
ಯೋಗ ಮತ್ತು ಪ್ರಾಣಾಯಾಮ ಶಿಬಿರ ನಡೆಯುವ ಒಂದು ವಾರ ಪೂರ್ತಿ ಸಾರ್ವಜನಿಕರ ಆರೋಗ್ಯ ತಪಾಸಣೆ ಉಚಿತವಾಗಿ ನಡೆಯಲಿದ್ದು ಓಷಧಿಗಳನ್ನು ರೋಗಿಗಳು ಖರೀದಿಸಬೇಕಾಗುತ್ತದೆ. ಅಸ್ತಮಾ, ಕ್ಷಯ, ಕ್ಯಾನ್ಸರ್, ಮಧುಮೇಹ, ರಕ್ತದೊತ್ತಡ ಇವೇ ಮೊದಲಾದ ಕಾಯಿಲೆಗಳಿಗೆ ಈ ಶಿಬಿರದಲ್ಲಿ ವಿಶಿಷ್ಟ ಚಿಕಿತ್ಸೆ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ.
ಈ ಶಿಬಿರದಲ್ಲಿ ಪಾಲ್ಗೊಳ್ಳುವವರಿಗೆ 2100, 1100, 500 ಹಾಗೂ 100 ರೂ. ಮೊತ್ತದ ಪ್ರವೇಶ ಪತ್ರ ನೀಡಲಾಗುತ್ತಿದ್ದು ಈ ಹಣ ಪತಂಜಲಿ ಯೋಗಕೇಂದ್ರಕ್ಕೆ ಬ್ಯಾಂಕ್ ಮೂಲಕ ಸಂದಾಯವಾಗುತ್ತದೆ ಎಂದು ತಿಳಿದುಬಂದಿದೆ.
|