ಹಿಂದೂಗಳ ಶ್ರದ್ದಾಕೇಂದ್ರವಾದ ಬಾಬಾ ಬುಡನ್ಗಿರಿಯ ದತ್ತ ಪೀಠವನ್ನು ಉಳಿಸಲು ಕಟಿ ಬದ್ಧವಾಗಿರುವ ಶ್ರೀರಾಮ ಸೇನೆ, ದತ್ತ ಜಯಂತಿಯ ಆಚರಣೆಯನ್ನು ವಿಭಿನ್ನ ರೀತಿಯಲ್ಲಿ ನಡೆಸಲಿದೆ.
ಹಿಂದೂ ಸಮಾಜದ ಉನ್ನತಿಗಾಗಿ, ಏಕತೆಗಾಗಿ ವಿಶಿಷ್ಟ ರೀತಿಯಲ್ಲಿ ಪ್ರತಿ ತಾಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಈ ಅಚರಣೆ ನಡೆಸಲು ಶ್ರೀರಾಮ ಸೇನೆಯು ಸಂಕಲ್ಪಿಸಿದ್ದು ಈ ಹಿನ್ನೆಲೆಯಲ್ಲಿ ಸೇನೆಯ ಬೆಂಗಳೂರು ಘಟಕ ಬಸವನಗುಡಿಯ ಗವಿಗಂಗಾಧರೇಶ್ವರ ದೇವಸ್ಥಾನದ ಬಳಿಯಿರುವ ಶ್ರೀ ಗೋಸಾಯಿ ಮಠದಲ್ಲಿ ಇದೇ ತಿಂಗಳ 23ರಂದು ಸಾಮೂಹಿಕ ಶ್ರೀ ಸತ್ಯದತ್ತ ವ್ರತವನ್ನು ನಡೆಸಲು ನಿರ್ಧರಿಸಿದೆ.
ಜಾತಿ ಭೇದವಿಲ್ಲದೆ ಸಮಸ್ತ ಹಿಂದೂ ಬಾಂಧವರೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿದೆ. ಪೂಜ್ಯ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ದತ್ತಪೀಠದಲ್ಲಿ ಪ್ರಜ್ವಲಿತವಾದ ಜ್ಯೌತಿಯಿಂದ ದೀಪ ಬೆಳಗಿಸಿ ಈ ವ್ರತವನ್ನು ಪ್ರಾರಂಭಿಸಲಾಗುವುದು ಎಂದು ಸೇನೆಯ ಪ್ರಕಟಣೆ ತಿಳಿಸಿದೆ.
ಇದರ ಜೊತೆಗೆ ದತ್ತಪೀಠ ವಿಮುಕ್ತಿ ಆಂದೋಲನವನ್ನೂ ಸೇನೆಯು ಹಮ್ಮಿಕೊಂಡಿದ್ದು ಇದರ ಅಂಗವಾಗಿ ರಾಜ್ಯಪಾಲರಿಗೆ ಮನವಿ ಪತ್ರವೊಂದನ್ನು ಸಲ್ಲಿಸಲಾಗಿದೆ ಎಂದು ಸೇನೆಯು ತಿಳಿಸಿದೆ.
|