ಟ್ರ್ಯಾಕ್ಟರ್ ಖರೀದಿಗೆಂದು ಐಸಿಐಸಿಐ ಬ್ಯಾಂಕಿನಿಂದ ಮಾಡಿದ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ರೈತ ಸಿದ್ಧರಾಜು ಪ್ರಕರಣದ ತನಿಖೆಗೆಂದು ತನಿಖಾ ತಂಡದ ರಚನೆಯಾಗಿದೆ.
ಸಾಲದ ರೂಪದಲ್ಲಿ ಟ್ರ್ಯಾಕ್ಟರ್ ಕೊಂಡಿದ್ದ ಸಿದ್ಧರಾಜುಗೆ ಐಸಿಐಸಿಐ ಬ್ಯಾಂಕ್ ವತಿಯಿಂದ ಟ್ರ್ಯಾಕ್ಟರ್ಸ್ ಬಿಡಿಭಾಗ ದೊರೆತಿರಲಿಲ್ಲ. ಡೀಲರ್ ಸಹ ಈ ವಿಷಯದಲ್ಲಿ ಶಾಮೀಲಾಗಿರುವುದರಿಂದ ಇವರ ವಂಚನೆಗೆ ಸಿದ್ಧರಾಜು ಬಲಿಪಶುವಾಗಿದ್ದಾರೆ ಎಂದು ರೈತ ಮುಖಂಡರು ಆರೋಪಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೆ.ವಿಶ್ವನಾಥ ರೆಡ್ಡಿ ಈ ಕ್ರಮ ಕೈಗೊಂಡಿದ್ದಾರೆ.
ತಂಡದ ನೇತೃತ್ವವನ್ನು ಜಂಟಿ ಕೃಷಿ ನಿರ್ದೇಶಕರು ವಹಿಸಿದ್ದು, ಸಹಕಾರ ಇಲಾಖೆಯ ಉಪಬಂಧಕರು ಹಾಗೂ ಲೀಡ್ ಬ್ಯಾಂಕ್ ಮ್ಯಾನೇಜರ್‌ರವರು ಈ ತಂಡದಲ್ಲಿ ಇದ್ದಾರೆ. ಎರಡು ದಿನಗಳಲ್ಲಿ ತನಿಖೆಯ ವರದಿ ನೀಡುವಂತೆ ತನಿಖಾ ತಂಡಕ್ಕೆ ಸೂಚನೆ ಸಿಕ್ಕಿದೆ ಎಂದು ತಿಳಿದುಬಂದಿದೆ.
ಈ ಮಧ್ಯೆ ಐಸಿಐಸಿಐ ಬ್ಯಾಂಕ್ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೆ ಸಿದ್ಧರಾಜು ಶವಸಂಸ್ಕಾರ ಮಾಡುವುದಿಲ್ಲ ಎಂದು ರೈತ ಮುಖಂಡರು ಪಟ್ಟುಹಿಡಿದಿರುವ ಘಟನೆ ವರದಿಯಾಗಿದೆ. ಪಂಚನಾಮೆಗೆ ಸಹಕರಿಸುವಂತೆ ಪೊಲೀಸರು ಮಾಡಿದ ಪ್ರಯತ್ನವೂ ವಿಫಲವಾಗಿದೆ ಎಂದು ತಿಳಿದುಬಂದಿದೆ.
|