ರೈತರ ಆತ್ಮಹತ್ಯೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು ಇದರ ತಡೆಗೆ ಆರ್ಟ್ ಆಫ್ ಲಿವಿಂಗ್‌ನ ಶ್ರೀ ರವಿಶಂಕರ್ ಗುರೂಜಿ ಹೊಸ ಸೂತ್ರಗಳನ್ನು ಮಂಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ರೈತರು ನೈಸರ್ಗಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಸಂಸ್ಥೆಯ ವತಿಯಿಂದ ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದ ಸುಮಾರು 700 ಹಳ್ಳಿಗಳಲ್ಲಿ ಈ ಪದ್ಧತಿಯನ್ನು ಪ್ರಾಯೋಗಿಕವಾಗಿ ಅಳವಡಿಸಲಾಗಿದ್ದು, ಅಲ್ಲಿ ಒಂದೂ ಆತ್ಮಹತ್ಯೆ ಪ್ರಕರಣ ವರದಿಯಾಗಿಲ್ಲ ಎಂದು ತಿಳಿಸಿದರು.
ಇದೇ ರೀತಿ ಕರ್ನಾಟಕದಲ್ಲೂ 100 ಹಳ್ಳಿಗಳನ್ನು ಈ ಕೃಷಿ ಪದ್ಧತಿಗಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ ಶ್ರೀಗಳು ಹೊಲದ ಅಂಚಿನಲ್ಲಿ ಲಕ್ಷ್ಮೀ ತಳಿ ಸಸಿಗಳನ್ನು ಬೆಳೆಸುವುದರೊಂದಿಗೆ ಬೇವಿನ ಎಲೆ, ಅರಿಶಿಣ, ಗಂಜಲ ಇವುಗಳ ಮಿಶ್ರಣವನ್ನು ಹೊಲಕ್ಕೆ ಸಿಂಪಡಿಸುವುದು ಈ ಪದ್ಧತಿಯಲ್ಲಿ ಸೇರಿದೆ. ಇದಕ್ಕೆ ಹೆಚ್ಚೇನೂ ಬಂಡವಾಳ ಬೇಕಿಲ್ಲವಾದ್ದರಿಂದ ರೈತರ ಆತ್ಮಹತ್ಯೆ ತಡೆಗೆ ಇದು ರಾಮಬಾಣವಾಗಲಿದೆ ಎಂದು ವಿವರಿಸಿದರು.
ರೈತರು ಈ ನೈಸರ್ಗಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಪ್ರಾಣಾಯಾಮ ಮತ್ತು ಧ್ಯಾನದ ಅಭ್ಯಾಸವನ್ನೂ ಮಾಡಬೇಕು. ಇದರಿಂದ ಮಾನಸಿಕ ಒತ್ತಡ ನಿವಾರಣೆ ಸಾಧ್ಯ. ಔಷಧಿಯಿಂದ ವಾಸಿಯಾಗದ ಎಷ್ಟೋ ಕಾಯಿಲೆಗಳು ಸುದರ್ಶನ ಕ್ರಿಯೆಯ ಮೂಲಕ ವಾಸಿಯಾಗಿವೆ. ಈ ನಿಟ್ಟಿನಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ರೈತರಿಗೆ ನೆರವಾಗಲಿದೆ ಎಂದು ರವಿಶಂಕರ್ ತಿಳಿಸಿದರು.
|