ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಒದಗಿಸುವ ವಿಪ್ರೊ ಲಿಮಿಟೆಡ್ ಕಂಪನಿಯು ವಿಶಾಖಪಟ್ಟಣದಲ್ಲಿರುವ ಆಂಧ್ರ ವಿಶ್ವವಿದ್ಯಾಲಯದೊಂದಿಗೆ ಒಪ್ಪಂದವೊಂದನ್ನು ಮಾಡಿಕೊಂಡಿದೆ.
ಶೈಕ್ಷಣಿಕ ಚಟುವಟಿಕೆಗಳನ್ನು ಯೋಜನಾಬದ್ಧವಾಗಿ ರೂಪಿಸಲು ಹಾಗೂ ವಿದ್ಯಾರ್ಥಿ-ಸಿಬ್ಬಂದಿ-ಆಡಳಿತ ಮಂಡಳಿಗಳ ನಡುವಣ ಸಂಪರ್ಕ ಸೇತುವಾಗುವ ನಿಟ್ಟಿನಲ್ಲಿ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಲು ಈ ಒಪ್ಪಂದ ನೆರವಾಗಲಿದೆ.
ಶೈಕ್ಷಣಿಕ ಚಟುವಟಿಕೆಗಳು ಮತ್ತು ಸಂವಾದ ಕಾರ್ಯಕ್ರಮಗಳು, ತಂತ್ರಜ್ಞಾನದ ಪ್ರಾಯೋಜಕತ್ವ ಹಾಗೂ ವಿದ್ಯಾರ್ಥಿಗಳ ಕಾರ್ಯಾಗಾರಗಳ ಆಯೋಜನೆಗಳನ್ನು ಈ ಒಪ್ಪಂದವು ಒಳಗೊಂಡಿರುತ್ತದೆ ಎಂದು ತಿಳಿದುಬಂದಿದೆ.
ಈ ಒಪ್ಪಂದದ ಕುರಿತು ಎರಡೂ ವಲಯಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಾಣಿಜ್ಯ ವಲಯದಲ್ಲಿನ ಸವಾಲುಗಳನ್ನು ದಿಟ್ಟತನದಿಂದ ಎದುರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದು ಈ ಒಪ್ಪಂದದ ಉದ್ದೇಶ ಎಂದು ವಿಪ್ರೊ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷ ಪ್ರದೀಪ್ ತಿಳಿಸಿದ್ದಾರೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜರು ಶಿಕ್ಷಣದ ಬೆಳವಣಿಗೆ ಕುರಿತಾಗಿ ಗಮನ ಹರಿಸಿರುವುದು ಒಂದು ಉತ್ತಮ ಬೆಳವಣಿಗೆ ಎಂದು ಆಂಧ್ರ ವಿಶ್ವವಿದ್ಯಾಲಯದ ಉಪ ಕುಲಪತಿ ಎಲ್.ವೇಣುಗೋಪಾಲ್ ಪ್ರತಿಕ್ರಿಯಿಸಿದ್ದಾರೆ.
|