ಉತ್ತರ ಪ್ರದೇಶದ ಮುಖ್ಯಮಂತ್ರಿ ಹಾಗೂ ಬಹುಜನ ಸಮಾಜವಾದಿ ಪಕ್ಷದ ರಾಷ್ಟ್ತ್ರೀಯ ಅಧ್ಯಕ್ಷೆ ಮಾಯಾವತಿ ಎರಡು ದಿನಗಳ ಭೇಟಿಗಾಗಿ ನಗರಕ್ಕಾಗಮಿಸಿದ್ದಾರೆ. ಸದ್ಯದಲ್ಲಿಯೇ ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಮಾಯಾವತಿಯವರ ಈ ಭೇಟಿ ಮಹತ್ವವನ್ನು ಪಡೆದಿದೆ. ರಾಜ್ಯ ಮಟ್ಟದಲ್ಲಿ ಪಕ್ಷದ ಸಂಘಟನೆಯನ್ನು ತಳಮಟ್ಟದಿಂದ ಸದೃಢಗೊಳಿಸುವ ಉದ್ದೇಶದ ಆಂದೋಲನಕ್ಕೆ ಮಾಯಾವತಿಯವರು ನಾಳೆ ಚಾಲನೆ ನೀಡಲಿದ್ದಾರೆ.
ಉತ್ತರ ಪ್ರದೇಶದಲ್ಲಿ ಅನುಸರಿಸಲಾದ ರಾಜಕೀಯ ತಂತ್ರವನ್ನೇ ಕರ್ನಾಟಕ ರಾಜ್ಯದಲ್ಲೂ ಪ್ರಯೋಗಿಸಿ ಸರ್ವಜನರ ಬೆಂಬಲದಿಂದ ಅಧಿಕಾರ ಸೂತ್ರ ಹಿಡಿಯುವ ಬಿಎಸ್ಪಿ ನಾಯಕರ ಲೆಕ್ಕಾಚಾರಕ್ಕೆ ನಾಳೆ ಅರಮನೆ ಮೈದಾನದಲ್ಲಿ ಮುನ್ನುಡಿ ಬರೆಯಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.
ವಿವಿಧ ಪಕ್ಷಗಳಲ್ಲಿದ್ದು ಅಸಮಾಧಾನಗೊಂಡಿರುವ ನಾಯಕರನ್ನು ಬಿಎಸ್ಪಿಯತ್ತ ಸೆಳೆಯುವ ಪ್ರಯತ್ನಗಳು ಈಗಾಗಲೇ ನಡೆದಿದ್ದು, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ನಾಳೆ ವಿಧ್ಯುಕ್ತವಾಗಿ ಬಿಎಸ್ಪಿ ಸೇರಲಿದ್ದಾರೆ. ಅವರೊಂದಿಗೆ ಅವರ ಬೆಂಬಲಿಗರೂ ಬಿಎಸ್ಪಿ ಸೇರಲಿದ್ದು ಬದಲಾವಣೆಯ ಗಾಳಿ ಬೀಸಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.
|