ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜ್ಯ ಕಾಂಗ್ರೆಸಿನಲ್ಲೂ ಎಲ್ಲವೂ ಸರಿ ಇಲ್ಲ...
ಭಿನ್ನಮತದ ಗುಪ್ತಗಾಮಿನಿ: ಸಿದ್ದು-ಮಹದೇವು ಜಟಾಪಟಿ
ಮೈಸೂರಿನಲ್ಲಿ ಭಾನುವಾರ ಯುವ ಕಾಂಗ್ರೆಸ್ ಚೈತನ್ಯ ಸಮಾವೇಶ ನಡೆಯುತ್ತಿರುವ ಸಂದರ್ಭದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಎಮ್.ಮಹದೇವು ನಡುವೆ ನಡೆದ ಜಟಾಪಟಿ ಕಾಂಗ್ರೆಸ್ ಪಕ್ಷದಲ್ಲಿ ಗುಪ್ತಗಾಮಿನಿಯಂತೆ ಹರಿಯುತ್ತಿರುವ ಭಿನ್ನಮತವನ್ನು ಎತ್ತಿ ತೋರಿಸಿದೆ.

ಕಾಂಗ್ರೆಸ್ ಪಕ್ಷಕ್ಕೆ ಇತ್ತೀಚೆಗೆ ವಲಸೆ ಬಂದವರ ದರ್ಬಾರ್ ಹೆಚ್ಚಾಗಿದೆ ಎಂಬರ್ಥದಲ್ಲಿ ಮಹಾದೇವ್ ಅವರು ಮಾತನಾಡಿದ್ದೇ ಸಿದ್ದು ಬೆಂಬಲಿಗರನ್ನು ಕೆರಳಿಸಲು ಕಾರಣವಾಗಿ ಎಲ್ಲರ ಸಮ್ಮುಖದಲ್ಲೇ ಮುಖಂಡರು ಕೊರಳುಪಟ್ಟಿ ಹಿಡಿಯುವ ಮಟ್ಟಿಗೆ ಇದು ಮುಂದುವರಿದಿತ್ತು.

ಈ ಕುರಿತು ಅಭಿಪ್ರಾಯ ಕೇಳಿದಾಗ, "ಭಿನ್ನಾಭಿಪ್ರಾಯಗಳು ಎಲ್ಲ ಪಕ್ಷ ಹಾಗೂ ವ್ಯಕ್ತಿಗಳಲ್ಲಿರುವುದು ಸಹಜ. ಅದನ್ನು ಬಗೆಹರಿಸಿಕೊಳ್ಳಲು ಬೇರೆಯದೇ ಆದ ವೇದಿಕೆಗಳಿವೆ. ಚುನಾವಣೆ ಯಾವುದೇ ಕ್ಷಣದಲ್ಲಿ ಎದುರಾಗಬಹುದಾದ ಈ ಸನ್ನಿವೇಶದಲ್ಲಿ ಈ ರೀತಿ ಬಹಿರಂಗವಾಗಿ ಕೈ ಮಿಲಾಯಿಸುವುದು ಯಾವುದೇ ಪಕ್ಷಕ್ಕೂ ಶೋಭೆ ತರುವ ವಿಷಯವಲ್ಲ. ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ಮತದಾರ ಈಗ ತುಂಬಾ ಸೂಕ್ಷ್ಮವಾಗಿದ್ದಾನೆ. ಪ್ರತಿಯೊಂದು ಘಟನೆಯನ್ನೂ ವಿಶ್ಲೇಷಿಸುವಷ್ಟು ಪ್ರಬುದ್ಧನಾಗಿದ್ದಾನೆ. ಇಲ್ಲಿ ಯಾರದು ತಪ್ಪು, ಯಾರದು ಸರಿ ಎನ್ನುವುದಕ್ಕಿಂತ ಈ ಘಟನಾವಳಿ ವಿದ್ಯುನ್ಮಾನ ಮಾಧ್ಯಮಗಳ ಮುಖಾಂತರ ಜನರನ್ನು ತಲುಪುತ್ತವೆ ಎಂಬ ವಿವೇಚನೆ ಇಬ್ಬರೂ ಮುಖಂಡರಲ್ಲಿ ಇರಬೇಕಿತ್ತು. ಈ ಘಟನೆಯಿಂದಾಗಿ ತಪ್ಪು ಸಂದೇಶ ಜನರಿಗೆ ತಲುಪುತ್ತದೆ" ಎಂದು ಹೆಸರು ಹೇಳಲು ಬಯಸದ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಪ್ರತಿಕ್ರಿಯಿಸಿದರು.

"ಈಗಾಗಲೇ ನಾಯಕತ್ವದ ಕೊರತೆಯಿಂದ ಕಾಂಗ್ರೆಸ್ ಸಾಕಷ್ಟು ಹಿನ್ನಡೆ ಎದುರಿಸುತ್ತಿದೆ. ಇತ್ತೀಚೆಗೆ ಮಲ್ಲಿಕಾರ್ಜುನ ಖರ್ಗೆಯವರು ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುವಾಗ ಮಾಜಿ ಸಚಿವರೊಬ್ಬರನ್ನು ಅವರ ಬೆಂಬಲಿಗರು ಬಾಜಾ ಬಜಂತ್ರಿಯ ಸಮೇತ ಅಕ್ಷರಶಃ ಹೊತ್ತುಕೊಂಡು ಬಂದರು. ಇದೂ ಸಹ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಬಿತ್ತರವಾಯಿತು. ಮಾಜಿ ಸಚಿವರು ಹಾಗೂ ಅವರ ಬೆಂಬಲಿಗರ ಈ ವರ್ತನೆಯ ಕುರಿತು ಖರ್ಗೆಯವರೂ ಸ್ಥಳದಲ್ಲಿಯೇ ಅಸಮಾಧಾನ ತೋರಿಸುತ್ತಿದ್ದುದು ಟಿವಿ ವಾಹಿನಿಗಳಲ್ಲಿ ಬಿತ್ತರವಾಯಿತು. ಇಷ್ಟೆಲ್ಲಾ ಆದರೂ ನಮ್ಮ ನಾಯಕರು ವಿವೇಚನಾಯುಕ್ತರಾಗಿ ನಡೆದುಕೊಳ್ಳದೇ ಇರುವುದು ವಿಷಾದಕರ" ಎಂದು ಮೈಸೂರಿನ ಈ ಕಾರ್ಯಕರ್ತರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಮತ್ತಷ್ಟು
ದೇವನಹಳ್ಳಿ ಅಂ.ವಿಗೆ ಸುಪರ್ ಫಾಸ್ಟ್ ರೈಲು
ಉದ್ಯಾನ ನಗರಿಗೆ ಉತ್ತರ ಪ್ರದೇಶದ ಮಾಯಾವತಿ
ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ: ಎಂವಿಆರ್
ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಇಲ್ಲ: ಧರಂ
ಆಂಧ್ರ ವಿ.ವಿ.ಯೊಂದಿಗೆ ವಿಪ್ರೊ ಒಪ್ಪಂದ
ಶಾಸ್ತ್ತ್ರೀಯ ಸ್ಥಾನಮಾನ: ಸಂಸದರ ವಿರುದ್ಧ ಆರೋಪ