ಮಾಜಿ ಸಚಿವ ಎಂ.ಪಿ.ಪ್ರಕಾಶ್ ಬಿಜೆಪಿಯತ್ತ ಮುಖ ಮಾಡಿದ್ದಾರೆಯೇ? ಹೌದು ಎನ್ನುತ್ತವೆ ಬಿಜೆಪಿ ಮೂಲಗಳು.ಯಾವ ಪಕ್ಷಕ್ಕೆ ಸೇರಬೇಕು ಎಂಬುದರ ಕುರಿತು ಕಾದುನೋಡುವ ತಂತ್ರ ಅನುಸರಿಸಿದ್ದ ಪ್ರಕಾಶ್ ಸದ್ಯದಲ್ಲಿಯೇ ಬಿಜೆಪಿ ಸೇರಲಿದ್ದಾರೆ. ಈ ಕುರಿತಾದ ಮಾತುಕತೆಗಳು ನಡೆದಿವೆ ಎಂದು ಈ ಮೂಲಗಳು ಸ್ಪಷ್ಟಪಡಿಸಿವೆ.
ತಮ್ಮ ಪಕ್ಷವನ್ನು ಸೇರುವಂತೆ ಕಾಂಗ್ರೆಸ್, ಬಿಎಸ್ಪಿ, ಜೆಡಿಯು ಹಾಗೂ ಸಮಾಜವಾದಿ ಪಕ್ಷಗಳಿಂದಲೂ ಪ್ರಕಾಶ್‌ಗೆ ಆಹ್ವಾನ-ಒತ್ತಾಯಗಳು ಬಂದಿದ್ದವು. ಇದರಲ್ಲಿ ಜೆಡಿಯು, ಬಿಎಸ್ಪಿ ಹಾಗೂ ಸಮಾಜವಾದಿ ಪಕ್ಷಗಳು ಅಧಿಕಾರದ ಸಮೀಪಕ್ಕೆ ಬರುವ ಸಾಧ್ಯತೆ ಇಲ್ಲ ಎಂದು ಪ್ರಕಾಶ್ ಅನಿಸಿಕೆಯಾಗಿರುವುದರಿಂದ ಆ ಪಕ್ಷಗಳಿಗೆ ಅವರು ಸೇರುವುದಿಲ್ಲ ಎಂಬುದು ಕೆಲ ಕಾರ್ಯಕರ್ತರ ಅಭಿಪ್ರಾಯ.
ಅಷ್ಟೇ ಅಲ್ಲದೆ, ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿರುವ ಸಿದ್ದರಾಮಯ್ಯನವರಿಗೆ ಆ ಪಕ್ಷದಲ್ಲಿ ನಿರೀಕ್ಷಿತ ಸ್ಥಾನವೂ ಸಿಗದೆ ಸಂಕಟವನ್ನೆದುರಿಸುತ್ತಿದ್ದಾರೆ. ಹೀಗಾಗಿ ತಾವು ಕಾಂಗ್ರೆಸ್ ಸೇರಿದರೆ ತಮ್ಮ ಪರಿಸ್ಥಿತಿಯೂ ಅದೇ ಅಗಬಹುದು ಎಂಬ ಅರಿವೂ ಪ್ರಕಾಶ್ ಅವರಿಗಿದೆ. ಜೊತೆಗೆ ಗುಜರಾತ್ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯೂ ಜಯಭೇರಿ ಬಾರಿಸಿರುವುದರಿಂದ ಅವರು ಸದ್ಯದಲ್ಲಿಯೇ ಬಿಜೆಪಿ ಸೇರಲಿದ್ದಾರೆ ಎಂದು ತಿಳಿದುಬಂದಿದೆ. ಪ್ರಕಾಶ್‌ರವರು ಕೈಗೊಳ್ಳುವ ರಾಜಕೀಯ ನಿರ್ಧಾರಗಳಿಗೆ ನಾವೆಲ್ಲರೂ ಬದ್ಧರಾಗಲಿದ್ದೇವೆ ಎಂದು ಪ್ರಕಾಶ್ ಬಣಕ್ಕೆ ಸೇರಿರುವ ಅಮರೇಗವಡ ಬಯ್ಯಾಪುರ ಸ್ಪಷ್ಟಪಡಿಸಿದ್ದಾರೆ
|