ಲಂಡನ್ ಭಯೋತ್ಪಾದನೆಯ ಸಂಚಿನಲ್ಲಿ ಭಾಗಿಯಾದ ಆರೋಪದಿಂದ ಮುಕ್ತರಾದ ಭಾರತೀಯ ವೈದ್ಯ ಮೊಹಮದ್ ಹನೀಫ್ ಆಸ್ಟ್ರೇಲಿಯದಲ್ಲಿ ಮರುನೋಂದಣಿ ಮಾಡಿಕೊಂಡು ಕ್ವೀನ್ಸ್ಲ್ಯಾಂಡ್ ಗೋಲ್ಡ್ ಕೋಸ್ಟ್ ಆಸ್ಪತ್ರೆಯಲ್ಲಿ ಉದ್ಯೋಗಕ್ಕೆ ಅರ್ಜಿ ಹಾಕಬಹುದು ಎಂದು ಹನೀಫ್ ಅವರ ವಕೀಲರಾದ ಪೀಟರ್ ರೂಸೊ ತಿಳಿಸಿದ್ದಾರೆ.
ಭಾರತೀಯ ವೈದ್ಯ ಹನೀಫ್ ಅವರ ಉದ್ಯೋಗದ ವೀಸಾ ಮರಳಿಸುವ ನ್ಯಾಯಾಧೀಶರ ನಿರ್ಧಾರವನ್ನು ಆಸ್ಟ್ರೇಲಿಯದ ಫೆಡರಲ್ ಕೋರ್ಟ್ ಕಳೆದ ವಾರ ಎತ್ತಿಹಿಡಿದಿದ್ದು, ಹನೀಫ್ಗೆ ಸಂದ ಕಾನೂನಿನ ವಿಜಯವಾಗಿದೆ.
ತನ್ನ ಪತ್ನಿ ಫಿರ್ದೂಸ್ ಮತ್ತು ಮಗುವಿಗೆ ಕೂಡ ವೀಸಾ ನೀಡಲು ಹನೀಫ್ ಪ್ರಯತ್ನಿಸಬೇಕಾಗಿದೆ. ಆದರೆ ಆಸ್ಟ್ರೇಲಿಯಕ್ಕೆ ಪುನಃ ಉದ್ಯೋಗದ ಸಲುವಾಗಿ ತೆರಳಲು ಪತಿಗೆ ಅವಕಾಶ ನೀಡುವುದಕ್ಕೆ ಫಿರ್ದೂಸ್ ಕಳವಳ ವ್ಯಕ್ತಪಡಿಸಿದ್ದಾರೆಂದು ಹೇಳಲಾಗಿದೆ.
ಹೈಕೋರ್ಟ್ ನಿರ್ಧಾರದ ವಿರುದ್ಧ ತಾವು ಮೇಲ್ಮನವಿ ಸಲ್ಲಿಸುವುದಿಲ್ಲ ಮತ್ತು ವಿವಿಧ ಆಧಾರಗಳ ಮೇಲೆ ಹನೀಫ್ ವೀಸಾ ರದ್ದುಮಾಡುವುದಿಲ್ಲ ಎಂದು ಆಸ್ಟ್ರೇಲಿಯದ ವಲಸೆ ಸಚಿವ ಕ್ರಿಸ್ ಇವಾನ್ಸ್ ತಿಳಿಸಿದರು. ಹನೀಫ್ ದಕ್ಷ ಯುವ ವೈದ್ಯ ಎಂದು ಗೋಲ್ಡ್ ಕೋಸ್ಟ್ ಆಸ್ಪತ್ರೆಯ ಅವರ ಸಹೋದ್ಯೋಗಿಗಳು ಪರಿಗಣಿಸಿದ್ದಾರೆಂದು ಕ್ವೀನ್ಸ್ಲ್ಯಾಂಡ್ ಆರೋಗ್ಯ ವಕ್ತಾರ ತಿಳಿಸಿದ್ದಾರೆ.
|