ನಿನ್ನೆ ಮೈಸೂರಿನಲ್ಲಿ ಮಾಜಿ ಉಪ ಮುಖ್ಯಮಂತ್ರಿ ಸಿದ್ರಾಮಯ್ಯ ಹಾಗೂ ಮಾಜಿ ಸಚಿವ ಎಂ.ಮಹಾದೇವ್ ಬಣಗಳ ನಡುವೆ ನಡೆದ ಜಟಾಪಟಿಯ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಶಿಸ್ತುಕ್ರಮಕ್ಕೆ ಮುಂದಾಗಿದ್ದು ಈ ಕುರಿತು ಸುತ್ತೋಲೆಯನ್ನು ಕಳಿಸಿದ್ದಾರೆ ಎಂದು ತಿಳಿದುಬಂದಿದೆ.
ಪಕ್ಷದಲ್ಲಿ ಮೂಲ ಕಾರ್ಯಕರ್ತರು ಹಾಗೂ ವಲಸೆ ಬಂದವರು ಎಂಬ ಬಗ್ಗೆ ಯಾವುದೇ ತಾರತಮ್ಯ ಮಾಡುವಂತಿಲ್ಲ ಎಂಬುದು ಈ ಸುತ್ತೋಲೆಯ ಆಶಯವಾಗಿದೆ ಎಂದು ತಿಳಿದುಬಂದಿದೆ. ಕೆಪಿಸಿಸಿ ನಾಯಕರ ಬದಲಾವಣೆ ಕುರಿತು ಪಕ್ಷದಲ್ಲಿ ಆಗಿಂದಾಗ್ಗೆ ಒತ್ತಾಯ ಬರುತ್ತಿರುವ ಹಾಗೂ ಪಕ್ಷದಲ್ಲಿ ತಮಗೆ ಮನ್ನಣೆ ಇಲ್ಲ ಎಂದು ಪಕ್ಷದ ವರಿಷ್ಠರ ಮುಂದೆ ಸಿದ್ರಾಮಯ್ಯ ಮನವಿ ಸಲ್ಲಿಸಲಿರುವ ಅಂಶಗಳ ಹಿನ್ನೆಲೆಯಲ್ಲಿ ಖರ್ಗೆಯವರ ಈ ಸುತ್ತೋಲೆಗೆ ಮಹತ್ವ ಬಂದಿದೆ.
ಚಾಮರಾಜನಗರದ ವರದಿ: ಈ ಮಧ್ಯೆ ಎಂ.ಮಹದೇವ್ ಅವರ ಭಾಷಣಕ್ಕೆ ಸಂಬಂಧಿಸಿ ಸಿದ್ರಾಮಯ್ಯನವರು ಹಾಗೂ ಅವರ ಬೆಂಬಲಿಗರ ನಡವಳಿಕೆಯನ್ನು ಖಂಡಿಸಿ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ತಿಳಿದುಬಂದಿದೆ.
ಆಕ್ರಮಣಕಾರಿ ನಡವಳಿಕೆ ತೋರಿದವರಿಗೆ ಈ ಪ್ರತಿಭಟನೆಯಲ್ಲಿ ಬುದ್ದಿ ಕಲಿಸಲಾಗುವುದು ಎಂದು ಇದರ ನೇತೃತ್ವ ವಹಿಸಿರುವ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ನಾಗರಾಜಪ್ಪ ಹೇಳಿದ್ದಾರೆ ಎಂದು ತಿಳಿದುಬಂದಿದೆ.
|