ಬಿಜೆಪಿಯಿಂದ ಸ್ಪರ್ಧಿಸಬಯಸುವವರ ಬಗ್ಗೆ ಯಾವುದೇ ಪ್ರತಿಕೂಲ ವರದಿಯಾಗಲೀ, ಆಧಾರ ಸಹಿತ ವಿವರಗಳಾಗಲೀ ದೊರೆತರೆ ಅವರಿಗೆ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಇದು ಪಕ್ಷದ ಹೈಕಮಾಂಡ್ ಹಾಗೂ ಸಂಘದ ಪರಿವಾರದ ದೃಢ ನಿರ್ಧಾರವಾಗಿದೆ. ಪಕ್ಷದ ಟಿಕೆಟ್ ನೀಡಿಕೆ ಬಗೆಗಾಗಲೀ, ನಿರಾಕರಣೆ ಕುರಿತಾಗಲೀ ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಈ ಬಾರಿ ಬಿಜೆಪಿಗೆ ಮತ ನೀಡಬೇಕೆಂದು ರಾಜ್ಯದ ಮತದಾರರು ನಿರ್ಧರಿಸಿದ್ದಾರೆ. ಜೆಡಿಎಸ್ ಎಂಬ ಪಕ್ಷ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಕಾಂಗ್ರೆಸ್ ಪಕ್ಷವಂತೂ ಒಳಜಗಳದಿಂದ ತತ್ತರಿಸುತ್ತಿದೆ. ಮೈಸೂರಿನ ಯುವ ಕಾಂಗ್ರೆಸ್ ಸಮಾವೇಶದಲ್ಲಿ ನಡೆದ ಕಿತ್ತಾಟವೇ ಇದಕ್ಕೆ ಸಾಕ್ಷಿ ಎಂದು ಸದಾನಂದ ಗೌಡ ತಿಳಿಸಿದರು.
ಪಕ್ಷದ ದ್ವಿತೀಯ ಹಂತದ ಜನಜಾಗೃತಿ ಸಭೆ ಈಗಾಗಲೇ ಆರಂಭವಾಗಿದ್ದು ರಾಯಚೂರಿನಲ್ಲಿ ಜನವರಿ 3 ರಂದು ಬೃಹತ್ ರೈತ ಸಮಾವೇಶ ನಡೆಸಲಾಗುವುದು. ಸುಮಾರು 1 ಲಕ್ಷ ಜನ ಭಾಗವಹಿಸಲಿರುವ ಈ ಸಮಾವೇಶವನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಉದ್ಘಾಟಿಸಲಿದ್ದಾರೆ ಎಂದು ಸದಾನಂದಗೌಡ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
|