ವಿಶ್ವಸಂಸ್ಥೆಯ ಬಡತನ ನಿರ್ಮೂಲನಾ ಕಾರ್ಯಕ್ರಮದ ಯಶಸ್ಸಿಗೆ ಜನರ ಸಹಕಾರ ಅತ್ಯಗತ್ಯ ಎಂದು ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್ ಗುರೂಜಿ ತಿಳಿಸಿದ್ದಾರೆ. ಅವರು ನಗರದ ಹೊರವಲಯದಲ್ಲಿರುವ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ತ್ರೀಯ ಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ವಿಶ್ವಸಂಸ್ಥೆಯು ಶತಮಾನಗಳಿಂದ ನಡೆಸುತ್ತಿರುವ ಅಭಿವೃದ್ದಿ ಸಾಧನೆಗೆ ಸರ್ಕಾರೇತರ ಸಂಘ ಸಂಸ್ಥೆಗಳು ಕೈಜೋಡಿಸಬೇಕು. ಬಡತನ ನಿರ್ಮೂಲನೆ, ಪರಿಸರ ಸಂರಕ್ಷಣೆ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ, ಜಲ ಸಂರಕ್ಷಣೆ ಹೀಗೆ ಹತ್ತು ಹಲವು ವಿಶ್ವಸಂಸ್ಥೆಯ ಕಾರ್ಯಕ್ರಮಗಳಿಗೆ ಸಮುದಾಯದ ಸಹಭಾಗಿತ್ವ ಅಗತ್ಯವಿದೆ ಎಂದು ಅವರು ಹೇಳಿದರು.
ಸರ್ಕಾರೇತರ ಸಂಸ್ಥೆಗಳನ್ನು ವಿಶ್ವಸಂಸ್ಥೆಯ ಇಂತಹ ಕಾರ್ಯಕ್ರಮಗಳಲ್ಲಿ ತೊಡಗಿಸಲು ಜನವರಿ 31ರಿಂದ ಫೆಬ್ರವರಿ 2ರವರೆಗೆ ಬೆಂಗಳೂರಿನ ಆರ್ಟ್ ಲಿವಿಂಗ್ ಸೆಂಟರ್‌ನಲ್ಲಿ ಎನ್ಜಿಒಗಳ 3 ದಿನದ ಸಮ್ಮೇಳನ ನಡೆಸಲಾಗುವುದೆಂದು ಗುರೂಜಿ ಹೇಳಿದ್ದಾರೆ.
ಅತಿ ಕಡಿಮೆ ಅವಧಿಯಲ್ಲಿ ಬಡತನ ನಿರ್ಮೂಲನಾ ಆಂದೋಲನಕ್ಕೆ 4.5 ದಶನಕ್ಷ ಜನರನ್ನು ಸೇರಿಸಿದ್ದಕ್ಕಾಗಿ ರವಿಶಂಕರ್ ಗುರೂಜಿಯವರಿಗೆ ವಿಶ್ವಸಂಸ್ಥೆಯ ಶತಮಾನದ ಅಭಿವೃದ್ಧಿ ಆಂದೋಲನದ ನಿರ್ದೇಶಕ ಸಲೀಲ್ ಶೆಟ್ಟಿ ಅವರು ಅಭಿನಂದನಾ ಪತ್ರ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಲೀಲ್ ಶೆಟ್ಟಿ, 11ನೇ ಪಂಚವಾರ್ಷಿಕ ಯೋಜನೆಯಲ್ಲಿ ವಿಶ್ವಸಂಸ್ಥೆಯ ಬಡತನ ನಿರ್ಮೂಲನಾ ಕಾರ್ಯಕ್ರಮದ ಹತ್ತು ಹಲವು ಅಂಶಗಳನ್ನು ಅಳವಡಿಸಲಾಗುವುದು ಎಂದರು.
|