ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
"ಪ್ರೀತಿ ಏಕೆ.ಭೂಮಿ ... ಬಿಡುಗಡೆಗೆ ವಿರೋಧ
ಗೀತೆಯಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ನೋವು
ಪ್ರೇಮ್ ನಿರ್ದೇಶನದ ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುವಂತಹ ಗೀತೆಯೊಂದನ್ನು ಬಳಸಿಕೊಳ್ಳಲಾಗಿದೆ. ಇದನ್ನು ಹಿಂತೆಗೆದುಕೊಳ್ಳುವವರೆಗೂ ರಾಜ್ಯದಾದ್ಯಂತ ಚಿತ್ರದ ಬಿಡುಗಡೆಗೆ ತಡೆಯೊಡ್ಡಲಾಗುವುದು ಎಂದು ಶ್ರೀರಾಮ ಸೇನಾ ತಿಳಿಸಿದೆ.

ಶ್ರೀರಾಮ ಸೇನಾದ ನಗರ ಘಟಕದ ಅಧ್ಯಕ್ಷ ಟಿ.ಎಸ್.ವಸಂತಕುಮಾರ್ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಶಂಕರ್ ಮಹದೇವನ್ ಮತ್ತು ಕೈಲಾಶ್ ಖೇರ್ರವರು ಹಾಡಿರುವ ಸುಳ್ಳೇ ಸುಳ್ಳು... ಎಂಬ ಹಾಡನ್ನು ಈ ಚಿತ್ರದಲ್ಲಿ ಬಳಸಲಾಗಿದ್ದು ಅದರಲ್ಲಿ ಶ್ರೀರಾಮ ಸುಳ್ಳು, ಆಂಜನೇಯ ಸುಳ್ಳು, ಹನುಮಂತ ಲಂಕೆ ಸುಟ್ಟಿದ್ದು ಸುಳ್ಳು, ಹರಿಶ್ಚಂದ್ರ ಸತ್ಯ ಹೇಳಿದ್ದು ಸುಳ್ಳು, ಮಹಾಭಾರತ ಸುಳ್ಳು, ಕುರುಕ್ಷೇತ್ರ ಯುದ್ಧ ಸುಳ್ಳು ಎಂಬ ಸಾಲುಗಳು ಬರುತ್ತವೆ.

ಈ ರೀತಿಯಾಗಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುವಂತಹ ಸಾಹಿತ್ಯವನ್ನು ನಿರ್ದೇಶಕ ಪ್ರೇಮ್ ಬಳಸಿರುವುದು ಖಂಡನೀಯ. ಒಂದು ಚಿತ್ರದಲ್ಲಿ ಇಂತಹ ಹಾಡುಗಳಿರುವುದು ಯಾವ ದೃಷ್ಟಿಯಿಂದ ನೋಡಿದರೂ ತಪ್ಪು ಎಂದು ನುಡಿದರು.

ಶ್ರೀರಾಮನನ್ನು ನಾವೆಲ್ಲಾ ಮರ್ಯಾದಾ ಪುರುಷೋತ್ತಮ ಎನ್ನುತ್ತೇವೆ, ಆತ ವಿಶ್ವಕ್ಕೇ ತಂದೆ ಎನ್ನುತ್ತೇವೆ. ಆದರೂ ಏಕಾಏಕಿ ಈ ರೀತಿಯಲ್ಲಿ ಹೀಗಳೆಯುವುದು ಆಕ್ಷೇಪಾರ್ಹವಲ್ಲವೇ ಎಂದು ಪ್ರಶ್ನಿಸಿದ ವಸಂತ್ಕುಮಾರ್, ಒಂದು ವೇಳೆ ಬೇರೆ ಧರ್ಮಗಳ ಬಗ್ಗೆ ಇಂತಹ ಹಾಡು ಬರೆದಿದ್ದರೆ ಉದ್ವಿಗ್ನ ಪರಿಸ್ಥಿತಿ ಮೂಡುತ್ತಿತ್ತು. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾದರೂ ಪರವಾಗಿಲ್ಲ ಎಂಬ ಹುಂಬತನ ಈ ನಿರ್ದೇಶಕರದು ಎಂದು ಕಟುವಾಗಿ ಟೀಕಿಸಿದರು.

ಈ ಧಾಷ್ರ್ಟ್ಯವನ್ನು ಖಂಡಿಸುವ ದೃಷ್ಟಿಯಿಂದ ವಿಜಯನಗರದ ಆರ್.ಪಿ.ಸಿ. ಲೇಔಟ್‌ನಲ್ಲಿರುವ ಅಶ್ವಿನಿ ಡಿಜಿಟಲ್ ಸ್ಟುಡಿಯೋಗೆ ನಾಳೆ(ಬುಧವಾರ) ಶ್ರೀರಾಮ ಸೇನಾದ ವತಿಯಿಂದ ಮುತ್ತಿಗೆ ಹಾಕಲಾಗುವುದು. ಇದಕ್ಕೆ ಸ್ಪಂದಿಸದಿದ್ದಲ್ಲಿ ಉಗ್ರವಾದ ಪ್ರತಿಭಟನೆ ನಡೆಸುವುದೇ ಅಲ್ಲದೇ ಚಿತ್ರ ಬಿಡುಗಡೆಯಾಗದಂತೆ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು. ಈ ಚಿತ್ರವನ್ನು ಬಿಡುಗಡೆ ಮಾಡದಂತೆ ಈಗಾಗಲೇ ಉತ್ತರ ಕರ್ನಾಟಕದ ಚಿತ್ರಮಂದಿರಗಳ ಮಾಲೀಕರಿಗೆ ಶ್ರೀರಾಮಸೇನಾ ಕಾರ್ಯಕರ್ತರು ಪ್ರತಿಭಟನಾ ಪತ್ರವನ್ನು ನೀಡಿದ್ದಾರೆ ಎಂದು ವಸಂತ ಕುಮಾರ್ ತಿಳಿಸಿದರು.

ಶ್ರೀರಾಮ ಇವರುಗಳಿಗೇನು ಬಿಟ್ಟಿ ಸಿಕ್ಕಿದ್ದಾನಾ? ಹಿಂದೂಗಳ ಸಂಸ್ಕ್ಕತಿ-ಧಾರ್ಮಿಕ ಪರಂಪರೆಗಳಿಗೆ ಕೊಡಲಿಪೆಟ್ಟು ನೀಡುವ ಇಂಥ ಚಿತ್ರಗಳಿಗೆ ಕನ್ನಡ ಚಿತ್ರರಸಿಕರೂ ಕೂಡಾ ಪ್ರೋತ್ಸಾಹ ನೀಡಬಾರದು ಎಂದು ವಸಂತ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿಕೊಂಡರು. ಶ್ರೀರಾಮ ಸೇನಾದ ಉಪಾಧ್ಯಕ್ಷ ಡಾ. ಶಿವಪುತ್ರ, ಪ್ರಧಾನ ಕಾರ್ಯದರ್ಶಿ ರಾಜೇಶ್, ಬೆಂಗಳೂರು ಮಹಾನಗರ ವಿಭಾಗದ ಸಂಚಾಲಕ ಶೈಲೇಶ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಮತ್ತಷ್ಟು
ಜೆಡಿಎಸ್ ವಿರುದ್ಧ ಹರಿಹಾಯ್ದ ಯಡಿಯೂರಪ್ಪ
ವೃದ್ಧರಿಗೆ ಮಾಸಿಕ ವೇತನ ಬಿಡುಗಡೆಗೆ ಒತ್ತಾಯ
ಬಡತನ ನಿರ್ಮೂಲನೆಗೆ ಸಹಕಾರ ಅಗತ್ಯ : ರವಿಶಂಕರ್
ಕಳಂಕಿತರಿಗೆ ಬಿಜೆಪಿ ಟಿಕೆಟ್ ಇಲ್ಲ: ಡಿವಿ
ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಗೆ ಬಿಜೆಪಿ ಚಾಲನೆ
ಅವಹೇಳನಕಾರಿ ಗೀತೆ ವಿರೋಧಿಸಿ ಪ್ರತಿಭಟನೆ