ಜಾತೀಯತೆ ಹಾಗೂ ಕೋಮುವಾದ ದೇಶದ ಅಭಿವೃದ್ದಿಗೆ ಮಾರಕವಾಗಿವೆ ಎಂದು ವಿಧಾನ ಪರಿಷತ್ ಸದಸ್ಯ ಪ್ರೊ.ಬಿ.ಕೆ.ಚಂದ್ರಶೇಖರ್ ಆತಂಕ ವ್ಯಕ್ತಪಡಿಸಿದ್ದಾರೆ. ಕಲಾರಂಗ ಮತ್ತು ಸ್ಪಂದನ ಗೆಳೆಯರ ಬಳಗ ಸೆನೆಟ್ ಹಾಲ್‌ನಲ್ಲಿ ಏರ್ಪಡಿಸಿದ್ದ ಆತ್ಮೀಯರ ಸಮಾಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಕಳೆದ 4-5 ವರ್ಷಗಳಲ್ಲಿನ ವ್ಯವಸ್ಥೆಯನ್ನು ಅವಲೋಕಿಸಿದರೆ ಆತಂಕ ಉಂಟಾಗುತ್ತದೆ. ಸಾರ್ವಜನಿಕ ಮೌಲ್ಯದ ಗುಣಮಟ್ಟ ಕುಸಿದಿರುವುದಷ್ಟೇ ಅಲ್ಲದೇ, ಯಾವುದೇ ಕ್ಷೇತ್ರದಲ್ಲೂ ಪಾರದರ್ಶಕತೆ ಇಲ್ಲ ಎಂದು ಚಂದ್ರಶೇಖರ್ ಈ ಸಂದರ್ಭದಲ್ಲಿ ವಿಷಾದಿಸಿದರು.
ಅಧಿಕಾರಿಗಳು, ರಾಜಕಾರಣಿಗಳು ಹವಾನಿಯಂತ್ರಿತ ಕೊಠಡಿಯಿಂದ ಹೊರಬರುತ್ತಿಲ್ಲ. ಜನ ಸಾಮಾನ್ಯರ ಸಮಸ್ಯೆಗಳು ಉಲ್ಬಣಿಸಿವೆ. ಹೀಗಿರುವಾಗ ದೇಶದ ಅಭಿವೃದ್ದಿ-ಪ್ರಗತಿಯನ್ನು ನೀರೀಕ್ಷಿಸುವುದಾದರೂ ಹೇಗೆ ಎಂದು ಚಂದ್ರಶೇಖರ್ ಪ್ರಶ್ನಿಸಿದರು.
ಸಮಾರಂಭದಲ್ಲಿ ಕವಿ ಹಾಗೂ ನಿವೃತ್ತ ಕೆ.ಎ.ಎಸ್.ಅಧಿಕಾರಿ ಚಿಕ್ಕವೆಂಕಟಪ್ಪನವರ ಚಿನ್ತಾಯಿ ಕವನ ಸಂಕಲನವನ್ನು ಚಂದ್ರಶೇಖರ್ ಬಿಡುಗಡೆ ಮಾಡಿದರು. ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ, ಸಂಗೀತ ನಿರ್ದೇಶಕ ಹಂಸಲೇಖ, ಅಪ್ಪಗೆರೆ ತಿಮ್ಮರಾಜು ಮೊದಲಾದವರು ಉಪಸ್ಥಿತರಿದ್ದರು.
|