ವಿಶ್ವದಲ್ಲಿರುವ ಸಕಲ ಜೀವಿಗಳು ಸುಖವಾಗಿರಬೇಕೆಂದು ಬಯಸುವುದು ಭಾರತೀಯ ಸಂಸ್ಕ್ಕತಿಯ ತತ್ವ ಎಂದು ಮಾಜಿ ರಾಜ್ಯಪಾಲ ನ್ಯಾಯಮೂರ್ತಿ ಡಾ.ಎಂ. ರಾಮಾ ಜೋಯಿಸ್ ತಿಳಿಸಿದ್ದಾರೆ.
ಓಂ ಯೋಗ ಪ್ರತಿಷ್ಠಾನವು ನಗರದಲ್ಲಿ ಹಮ್ಮಿಕೊಂಡಿದ್ದ ಯೋಗ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಬೌದ್ದಿಕ-ಶಾರೀರಿಕ ಸುಖದ ಕುರಿತು ನಮ್ಮ ಪುರಾಣಗಳು ತಿಳಿಸಿವೆ. ಶರೀರ ಮತ್ತು ಮನಸ್ಸುಗಳಿಗೆ ಶಿಸ್ತು ಕಲಿಸುವ ಶಕ್ತಿ ಯೋಗದಲ್ಲಿದೆ. ಆದರೆ ಇಂದು ಪಾಶ್ಚ್ಚಾತ್ಯರ ಕಲೆ-ಸಂಸ್ಕ್ಕತಿ, ಆಚಾರ-ವಿಚಾರಗಳಿಗೆ ಮಾರುಹೋಗಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.
ಇಂದು ವಿದೇಶಗಳಲ್ಲೂ ಯೋಗ ಮಹತ್ವವನ್ನು ಪಡೆದುಕೊಳ್ಳುತ್ತಿದೆ. ಯುವಕರು ದೇಶದ ಬಹು ದೊಡ್ಡ ಆಸ್ತಿ. ಆದ್ದರಿಂದ ಪೋಷಕರು ಚಿಕ್ಕಂದಿನಿಂದಲೇ ಮಕ್ಕಳಿಗೆ ಸಾಂಸ್ಕ್ಕತಿಕ ಮೌಲ್ಯಗಳ ಜತೆಗೆ ಯೋಗವನ್ನು ಅಭ್ಯಾಸ ಮಾಡಿಸಬೇಕು. ತನ್ಮೂಲಕ ದುರಭ್ಯಾಸಗಳಿಲ್ಲದ ಯುವ ಸಮೂಹವನ್ನು ಸಿದ್ದಪಡಿಸಬೇಕು ಎಂದ ರಾಮಾಜೋಯಿಸ್‌ರವರು ಯೋಗ ಮತ್ತು ಪ್ರಾಣಾಯಾಮದಿಂದ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂಬ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರವರು, ಯೋಗದಿಂದ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬಹುದು. ಜೀವನದಲ್ಲಿ ಸುಖ-ದುಃಖವನ್ನು ಸಮಾನವಾಗಿ ಸ್ವೀಕರಿಸಿದಾಗ ಸಮಸ್ಯೆಯೇ ಎದುರಾಗುವುದಿಲ್ಲ. ಯೋಗದಿಂದ ಮಾನಸಿಕ ಸಮತೋಲನ ಸಾಧ್ಯವಾಗುವುದರಿಂದ ದೇಹ-ಮನಸ್ಸುಗಳೆರಡು ಆರೋಗ್ಯವಾಗಿರುತ್ತದೆ. ಆದ್ದರಿಂದ ಯೋಗ ಪರಂಪರೆಯನ್ನು ಜನಪ್ರಿಯಗೊಳಿಸಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪ್ರಹ್ಲಾದರವರು ಬರೆದ ಪ್ರಾಣಾಯಾಮ ಹಾಗೂ ಸರಳ ಯೋಗಾಸನಗಳು ಗ್ರಂಥದ ಆಂಗ್ಲ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು. ಸಮಾರಂಭದಲ್ಲಿ ಮೈಸೂರಿನ ಸರಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಕಾಲೇಜಿನ ಪ್ರಾಧ್ಯಾಪಕಿ ಡಾ. ಉಮಾ ಎಸ್. ಸೌದಿ ಉಪಸ್ಥಿತರಿದ್ದರು.
|