ಕಲ್ಯಾಣ ಮಂಟಪಗಳಲ್ಲಿ ಮದುವೆ-ಮುಂಜಿ ಇತ್ಯಾದಿ ಸಮಾರಂಭಗಳು ನಡೆಯುವಾಗ ಆಹಾರ ಪೋಲಾಗುವುದನ್ನು ತಪ್ಪಿಸಲು ದಾವಣಗೆರೆಯ ಸ್ಫೂರ್ತಿ ಸೇವಾ ಟ್ರಸ್ಟ್ ಅನ್ನಬ್ರಹ್ಮಳಿ ಎಂಬ ವಿನೂತನ ಯೋಜನೆಯೊಂದನ್ನು ಆರಂಭಿಸಲಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಟ್ರಸ್ಟ್ ಸಂಸ್ಥಾಪಕ ಬಿ.ಸತ್ಯನಾರಾಯಣ ಮೂರ್ತಿಯವರು, ಸಮಾರಂಭಗಳಲ್ಲಿ ವಿನಾಕಾರಣ ಪೋಲಾಗುವ ಆಹಾರವನ್ನು ವಿಶೇಷ ವಾಹನವೊಂದರ ಮೂಲಕ ವೃದ್ಧಾಶ್ರಮ, ಅನಾಥಾಶ್ರಮ, ವಿಕಲ ಚೇತನರ ಶಾಲೆಗಳಿಗೆ ತಲುಪಿಸುವುದು ಹಾಗೂ ಕಡುಬಡವರಿಗೆ ವಿತರಿಸುವುದು ಈ ಯೋಜನೆಯ ಉದ್ದೇಶ ಎಂದು ತಿಳಿಸಿದರು.
ಈ ಉದ್ದೇಶಕ್ಕಾಗಿಯೇ ಸುಮಾರು 3 ಲಕ್ಷ ರೂ.ಮೌಲ್ಯದ ವಾಹನವೊಂದನ್ನು ಖರೀದಿಸಲಾಗಿದೆ. ಜೊತೆಗೆ ಕಲ್ಯಾಣ ಮಂಟಪಗಳಿಂದ ಆಹಾರವನ್ನು ವಿವಿಧೆಡೆಗೆ ಸಾಗಿಸಲು ಪೂರಕವಾಗಿರುವಂತೆ ಹಾಗೂ ಆಹಾರದ ತಾಜಾತನವನ್ನು ಕಾಯ್ದುಕೊಳ್ಳಲು ಅನುವಾಗುವಂತೆ ಸುಮಾರು 15 ಸಾವಿರ ರೂ. ಮೌಲ್ಯದ ಪಾತ್ರೆ ಹಾಗೂ ಸಾಮಗ್ರಿಗಳನ್ನು ಹೊಂದಲಾಗಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ದಾವಣಗೆರೆ ಒಂದರಲ್ಲೇ ಸುಮಾರು 40 ಕಲ್ಯಾಣ ಮಂಟಪಗಳಿದ್ದು ಒಂದು ಸಮಾರಂಭ ನಡೆದ ನಂತರ ಮತ್ತೊಂದು ಬಳಗಕ್ಕೆ ಕಲ್ಯಾಣ ಮಂಟಪವನ್ನು ಬಿಟ್ಟುಕೊಡುವ ವೇಳೆಯಲ್ಲಿ ಸುಮಾರು ಶೇಕಡ 40ರಷ್ಟು ಆಹಾರ ಅಪವ್ಯಯವಾಗುತ್ತದೆ ಎಂದು ತಿಳಿದುಬಂದಿದೆ. ಈ ನಿಟ್ಟಿನಲ್ಲಿ ಸದರಿ ಯೋಜನೆ ನೆರವಾಗಲಿದೆ ಎಂದು ಸತ್ಯನಾರಾಯಣ ಮೂರ್ತಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
|