ಯುವ ಕಾಂಗ್ರೆಸ್ ಸಮಾವೇಶದ ವೇಳೆ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಎಂ.ಮಹದೇವ್ ನಡುವೆ ನಡೆದ ಜಟಾಪಟಿಯ ಬಿಸಿ ಹೈಕಮಾಂಡ್‌ವರೆಗೆ ತಲುಪಿದೆ.
ಕಿತ್ತಾಟ ನಡೆದ ನಂತರ ಮೈಸೂರು-ಚಾಮರಾಜನಗರ ಜಿಲ್ಲೆಗಳಲ್ಲಿ ಈ ಇಬ್ಬರೂ ಮುಖಂಡರ ಬೆಂಬಲಿಗರು ಹಾಗೂ ಅಭಿಮಾನಿಗಳು ಪರಸ್ಪರ ಪ್ರತಿಭಟನೆಯಲ್ಲಿ ತೊಡಗಿರುವುದು ಕಾಂಗ್ರೆಸ್ ಪಕ್ಷದಲ್ಲಿ ಭೀತಿ ಹುಟ್ಟಿಸಿದೆ.
ವಿಧಾನ ಸಭಾ ಚುನಾವಣೆಗಳು ಸಮೀಪಿಸುತ್ತಿರುವಾಗ ಇಂಥ ಭಿನ್ನಾಭಿಪ್ರಾಯ ಸಲ್ಲದು ಎಂಬ ನಿರ್ಧಾರಕ್ಕೆ ಬಂದಿರುವ ಮಾಜಿ ಸಚಿವ ಎಚ್.ವಿಶ್ವನಾಥ್ ಹಾಗೂ ವಿಧಾನ ಪರಿಷತ್ ಸದಸ್ಯ ಡಿ.ಮಾದೇಗೌಡ ಸಮಾಲೋಚನೆಯ ಮೂಲಕ ಅಸಮಾಧಾನ-ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸಲು ಮುಂದಾಗಿದ್ದಾರೆಂದು ತಿಳಿದುಬಂದಿದೆ.
ನಗರದ ಖಾಸಗಿ ಹೋಟೆಲ್ ಒಂದರಲ್ಲಿ ಮಾಜಿ ಸಚಿವ ಮಹದೇವ್ ಅವರೊಂದಿಗೆ ಈ ಕುರಿತು ಚರ್ಚಿಸಿದ ಈ ಇಬ್ಬರೂ ಮುಖಂಡರು ಈ ಪ್ರಕರಣಕ್ಕೆ ತೆರೆ ಎಳೆಯುವ ಕುರಿತು ಮನವೊಲಿಕೆಗೆ ಪ್ರಯತ್ನಿಸಿದರೂ ಮಹದೇವ್ ಇದಕ್ಕೆ ಜಗ್ಗಲಿಲ್ಲ ಎಂದು ತಿಳಿದುಬಂದಿದೆ.
ಈ ಘಟನೆ ಸಂಭವಿಸಿದ ಮರುದಿನವೇ ತಮ್ಮನ್ನು ಮುಖಂಡರು ಭೇಟಿಯಾಗಬಹುದಿತ್ತು. ಆದರೆ ಪ್ರಕರಣ ಈಗ ಬೇರೆ ರೂಪ ತಳೆಯುತ್ತಿದೆ ಎಂಬ ಹೆದರಿಕೆಯಿಂದ ತಮ್ಮ ಮನವೊಲಿಸುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ ತಾವು ಈ ಪ್ರಕರಣವನ್ನಾಗಲೇ ಹೈಕಮಾಂಡ್ ವರಿಷ್ಠರ ಗಮನಕ್ಕೆ ತಂದಿದ್ದು ತೀರ್ಮಾನವನ್ನು ಅವರ ವಿವೇಚನೆಗೆ ಬಿಟ್ಟಿರುವುದಾಗಿ ಮಹದೇವ್ ಮುಖಂಡರಿಗೆ ತಿಳಿಸಿದರು ಎಂದು ಸುದ್ದಿಮೂಲಗಳು ತಿಳಿಸಿವೆ.
|