ಪ್ರೀತಿ ಏಕೆ ಭೂಮಿ ಭೂಮಿ ಮೇಲಿದೆ ಚಿತ್ರದ ಸುಳ್ಳೇ ಸುಳ್ಳು ಹಾಡಿನಲ್ಲಿರುವ ರಾಮ ಸುಳ್ಳು, ಸೀತಾಮಾತೆ ಸುಳ್ಳು ಎಂಬ ಸಾಲುಗಳನ್ನು ತೆಗೆದುಹಾಕುವಂತೆ ಒತ್ತಾಯಿಸಿ ಶ್ರೀರಾಮ ಸೇನಾ ವತಿಯಿಂದ ಭಾರೀ ಪ್ರತಿಭಟನೆ ನಡೆಯಿತು.
ಬೆಳಗ್ಗೆ ಆರ್ಪಿಸಿ ಲೇ ಓಟ್ನಲ್ಲಿನ ಅಶ್ವಿನಿ ಸ್ಟುಡಿಯೋಗೆ ಮುತ್ತಿಗೆ ಹಾಕಿದ ಶ್ರೀರಾಮ ಸೇನಾದ ಕಾರ್ಯಕರ್ತರು ಈ ಕುರಿತು ಸ್ಪಷ್ಟೀಕರಣ ಬಯಸಿ ಘೋಷಣೆಗಳನ್ನು ಕೂಗಿದರು.
ಈಗಾಗಲೇ ಮತಾಂತರದ ಪಿಡುಗು ಹಿಂದೂ ಧರ್ಮದ ಮೇಲೆ ಆಕ್ರಮಣ ಮಾಡುತ್ತಿದೆ. ಇಂಥ ಸನ್ನಿವೇಶದಲ್ಲಿ ಈ ಬಗೆಯ ಸಾಲುಗಳು ಹಾಡಲ್ಲಿದ್ದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬುದು ಪ್ರತಿಭಟನಾಕಾರರ ಅಭಿಪ್ರಾಯವಾಗಿತ್ತು.
ಈ ಕುರಿತು ನಿರ್ಮಾಪಕ ಅಶ್ವಿನಿ ರಾಮ್ಪ್ರಸಾದ್ರವರಿಂದ ಯಾವುದೇ ಸ್ಪಷ್ಟೀಕರಣ ಬರದಿದ್ದಾಗ ಸ್ಟುಡಿಯೋ ಒಳಗೆ ನುಗ್ಗಿದ ಪ್ರತಿಭಟನಾಕಾರರು ಗಾಜುಗಳನ್ನು ಒಡೆದು ಪೀಠೋಪಕರಣವನ್ನು ಧ್ವಂಸಮಾಡಿದರು. ಸ್ಥಳಕ್ಕೆ ಬಂದ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯನ್ನು ತಹಬಂದಿಗೆ ತಂದರು ಎಂದು ತಿಳಿದುಬಂದಿದೆ.
ನಂತರ ಶ್ರೀರಾಮ ಸೇನಾದ ಪ್ರತಿಭಟನಾಕಾರರೊಂದಿಗೆ ಮಾತನಾಡಿದ ನಿರ್ದೇಶಕ ಪ್ರೇಮ್ ಈ ಹಾಡನ್ನು ತೆರೆಯ ಮೇಲೆ ನೋಡಿದ ನಂತರ ಅದು ತಪ್ಪು ಎಂದು ನಿಮಗನಿಸಿದರೆ ತೆಗೆಯುತ್ತೇನೆ ಎಂದು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು ಎಂದು ಸುದ್ದಿಮೂಲಗಳು ತಿಳಿಸಿವೆ.
|