ಬೆಂಗಳೂರಿನಲ್ಲಿ ಭಾನುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ತನ್ನ ತಂದೆ, ತಾಯಿಗಳ ಶವಗಳೊಂದಿಗೆ ಎರಡು ರಾತ್ರಿಗಳನ್ನು ಕಳೆದ 5 ವರ್ಷದ ಎಳೆಯ ಬಾಲಕಿಯನ್ನು ನಗರದ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿದ್ದು, ಅವಳನ್ನು ತೀವ್ರ ನಿಗಾ ಘಟಕದಲ್ಲಿ ಇಡಲಾಗಿದೆ. ಬಾಲಕಿಯ ತಾಯಿಯು ಮನೆಯಿಂದ ಹೊರಗೆ ತೆರಳಿದ್ದಾಗ ಮಗುವಿನ ತಂದೆ ಮೊದಲಿಗೆ ಆತ್ಮಹತ್ಯೆ ಮಾಡಿಕೊಂಡರೆಂದು ತಿಳಿದುಬಂದಿದೆ.
ಪತ್ನಿ ಮನೆಗೆ ಹಿಂತಿರುಗಿದಾಗ ತನ್ನ ಪತಿ ಸಾವಿನ ಮಡುವಿನಲ್ಲಿ ಬಿದ್ದಿರುವ ದುರಂತವನ್ನು ಕಂಡು ತೀವ್ರ ದುಃಖಿತರಾದರು. ಪತಿಯ ಸಾವನ್ನು ಸಹಿಸಲಾಗದೇ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ ಪತ್ನಿ ಅದಕ್ಕೆ ಮುಂಚೆ ತನ್ನ 5 ವರ್ಷದ ಬಾಲಕಿಯ ಕುತ್ತಿಗೆಯನ್ನು ತುಂಡುಬಟ್ಟೆಯಿಂದ ಹಿಚುಕಿದ ಬಳಿಕ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರೆಂದು ಹೇಳಲಾಗಿದೆ.
ತಾಯಿ ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ಬಾಲಕಿ ಸ್ವಲ್ಪ ಕ್ಷಣಗಳ ಕಾಲ ಪ್ರಜ್ಞೆ ತಪ್ಪಿರಬಹುದೆಂದು ಭಾವಿಸಲಾಗಿದೆ. ಅವಳಿಗೆ ಎಚ್ಚರವಾದಾಗ ತಂದೆ, ತಾಯಿ ಸಾವಿನ ಮಡುವಿನಲ್ಲಿ ಬಿದ್ದಿರುವುದನ್ನು ಕಂಡ ಬಾಲಕಿ ಆಘಾತಗೊಂಡಳು. ಮನೆಗೆ ಒಳಗಿಂದ ಚಿಲಕ ಹಾಕಿದ್ದರಿಂದ ಹೊರಕ್ಕೆ ಬರಲಾಗದೇ ಭಾನುವಾರ ರಾತ್ರಿ ಮತ್ತು ಸೋಮವಾರ ಇಡೀ ದಿನ ತಂದೆ, ತಾಯಿಗಳ ಶವಗಳ ಜತೆ ಕಾಲಕಳೆದಳು.
ಮಂಗಳವಾರ ಬೆಳಿಗ್ಗೆ ನೆರಮನೆಯವರು ಅನುಮಾನಗೊಂಡು ಮನೆಯ ಕಿಟಕಿಯನ್ನು ಮುರಿದು ಒಳಗಿನ ದೃಶ್ಯ ವೀಕ್ಷಿಸಿದಾಗ ಸ್ತಂಭೀಭೂತರಾದರು. ದುರಂತಕ್ಕೆ ಕಾರಣವೇನೆಂದು ತಿಳಿದುಬಂದಿಲ್ಲ. ಬಾಲಕಿ ತನ್ನ ಆಘಾತಕಾರಿ ಕಥೆಯನ್ನು ತಂದೆಯ ಸೋದರನಿಗೆ ವಿವರಿಸಿದ್ದಾಳೆ.
|