ಪ್ರೇಮ್ ನಿರ್ದೇಶನದ "ಪ್ರೀತಿ ಏಕೆ ಭೂಮಿ ಮೇಲಿದೆ" ಚಿತ್ರದ ಸುಳ್ಳೇ ಸುಳ್ಳು ಗೀತೆಯಲ್ಲಿನ "ಶ್ರೀರಾಮ ಸುಳ್ಳು, ಆಂಜನೇಯ ಸುಳ್ಳು, ಹನುಮಂತ ಲಂಕೆ ಸುಟ್ಟಿದ್ದು ಸುಳ್ಳು, ಹರಿಶ್ಚಂದ್ರ ಸತ್ಯ ಹೇಳಿದ್ದು ಸುಳ್ಳು" ಎಂಬ ಸಾಲುಗಳನ್ನು ತೆಗೆಯುವವರೆಗೂ ತನ್ನ ಹೋರಾಟ ನಿಲ್ಲದು ಎಂದು ಶ್ರೀರಾಮಸೇನೆ ಸ್ಪಷ್ಟಪಡಿಸಿದೆ.
ಶ್ರೀರಾಮ ಸೇನೆಯ ನಗರ ಘಟಕದ ಅಧ್ಯಕ್ಷ ಟಿ.ಎಸ್.ವಸಂತಕುಮಾರ್ ಭವಾನಿಯವರು ಈ ಕುರಿತು ಪತ್ರಿಕಾ ಹೇಳಿಕೆಯೊಂದನ್ನು ನೀಡಿದ್ದು, ಶ್ರೀರಾಮ ಸೇನೆಯ ನಿಲುವುಗಳನ್ನು ತಿಳಿಸಿದ ನಂತರವೂ ಸದರಿ ಚಲನಚಿತ್ರಕ್ಕೆ ಸಂಬಂಧಪಟ್ಟವರು ಹಾಡಿನ ಆ ಸಾಲುಗಳನ್ನು ಚಿತ್ರದ ಬಿಡುಗಡೆಗೆ ಮುಂಚಿತವಾಗಿ ತೆಗೆಯಲು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ "ಪ್ರೀತಿ ಏಕೆ ಭೂಮಿ ಮೇಲಿದೆ" ಚಿತ್ರವನ್ನು ಬಿಡುಗಡೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
ಹಿಂದೂಗಳ ಬಗ್ಗೆ, ಹಿಂದೂ ದೇವತೆಗಳ ಬಗೆಗೆ ಏನು ಬೇಕಾದರೂ ಮಾತಾಡಿಕೊಳ್ಳಬಹುದು ಎಂಬ ಭಾವನೆಯೂ ಕೆಲವರಲ್ಲಿ ಮನೆ ಮಾಡಿದೆ. ಒಳ ಉಡುಪುಗಳ ಮೇಲೆ ಹಿಂದೂ ದೇವರುಗಳ ಚಿತ್ರವನ್ನು ಮುದ್ರಿಸುವಷ್ಟು ಧಾರ್ಷ್ಟ್ಯವನ್ನು ಕೆಲ ವಿದೇಶಿ ಕಂಪನಿಗಳು ತೋರಿಸಿವೆ. ಇಂಥ ಸಂದರ್ಭದಲ್ಲಿ ನಮ್ಮವರೇ ನಮ್ಮ ದೇವರುಗಳ ಬಗೆಗೆ ಹಗುರವಾಗಿ ಮಾತನಾಡಿದರೆ ಹೇಗೆ? ಎಂದು ಪ್ರಶ್ನಿಸಿರುವ ವಸಂತ್ ಕುಮಾರ್, ಇಂಥ ಗೀತೆಗಳನ್ನು ಬಿತ್ತರಿಸುವುದರಿಂದ ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸಿದಂತಾಗುತ್ತದೆ, ಸಮಾಜದ ಸ್ವಾಸ್ಥ್ಯವನ್ನು ಕೆಡಿಸಿದಂತಾಗುತ್ತದೆ ಎಂಬ ವಿವರಣೆ ನೀಡಿದ್ದಾರೆ.
|