ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದತ್ತಪೀಠ ಹಿಂದುಗಳಿಗೆ ಸೇರಿದ್ದು: ಚಿದಾನಂದ ಮೂರ್ತಿ
ಬಹಳ ಕಾಲದಿಂದ ವಿವಾದಕ್ಕೆ ಸಿಲುಕಿರುವ ಚಿಕ್ಕಮಗಳೂರಿನ ದತ್ತಪೀಠವು ಹಿಂದೂಗಳಿಗೆ ಸೇರಿದ್ದೆಂಬುದಕ್ಕೆ ದಾಖಲೆಗಳಿವೆ ಎಂದು ಸಂಶೋಧಕ ಡಾ.ಎಂ. ಚಿದಾನಂದಮೂರ್ತಿ ಸ್ಪಷ್ಟಪಡಿಸಿದ್ದಾರೆ.

ದತ್ತಪೀಠದ ಬಗ್ಗೆ ಇರುವ ಐತಿಹಾಸಿಕ ಸಂಗತಿಗಳು ಹಾಗೂ ನ್ಯಾಯಾಲಯದ ತೀರ್ಪುಗಳ ಹಿನ್ನೆಲೆಯನ್ನು ಗಮನಿಸಿದರೆ ಇದು ಹಿಂದೂಗಳ ಧಾರ್ಮಿಕ ಕೇಂದ್ರ ಎಂಬುದಕ್ಕೆ ಸ್ಪಷ್ಟ ದಾಖಲೆಗಳು ಲಭ್ಯವಾಗುತ್ತವೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ರಾಜ್ಯ ಸರ್ಕಾರವು 1976ರಲ್ಲಿ ದತ್ತಪೀಠವನ್ನು ಸುನ್ನಿ ದತ್ತಾತ್ರೇಯ ಪೀಠದ ಹೆಸರಿನಲ್ಲಿ ವಕ್ಫ್ ಮಂಡಳಿಗೆ ಸೇರ್ಪಡೆ ಮಾಡಿದ್ದನ್ನು ಪ್ರಶ್ನಿಸಿ ಹಿಂದೂಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಎರಡೂ ಧರ್ಮದವರಿಗೂ ಪೂಜೆಗೆ ಅವಕಾಶ ಮಾಡಿಕೊಡಬೇಕು ಮತ್ತು 1975ಕ್ಕೆ ಮುಂಚೆ ಇದ್ದಂತೆ ಪೀಠವನ್ನು ಮುಜರಾಯಿ ಇಲಾಖೆಗೆ ವಹಿಸಬೇಕು ಎಂದು ತೀರ್ಪು ನೀಡಿತ್ತು ಎಂದು ಅವರು ತಿಳಿಸಿದರು.

ಬಾಬಾ ಬುಡನ್‌ಗಿರಿ ಸಮಾಧಿ ದತ್ತಪೀಠದಲ್ಲಿ ಇದೆ ಎಂಬುದಕ್ಕೆ ದಾಖಲೆಗಳಿಲ್ಲ. ಅದರ ಬದಲಾಗಿ ನಾಗೇನಹಳ್ಳಿಯಲ್ಲಿ ಬಾಬಾ ಬುಡನ್ ಮತ್ತು ಅವನ ತಂದೆಯ ಸಮಾಧಿಗಳಿರುವುದಕ್ಕೆ ಸ್ಪಷ್ಟ ದಾಖಲೆಗಳಿವೆ. ಈ ಹಿನ್ನೆಲೆಯಲ್ಲೂ ಇದು ದತ್ತಪೀಠಕ್ಕೆ ಸೇರಿದ್ದು ಎಂಬುದನ್ನು ತಿಳಿಯಬಹುದು ಎಂದು ಅವರು ತಿಳಿಸಿದರು.

ಹಿಂದೂಗಳಿಗೆ ಪೂಜೆ ಮಾಡುವ ಅವಕಾಶವನ್ನು ನ್ಯಾಯಾಲಯ ನೀಡಿದ್ದರೂ, ರಾಜಕೀಯ ಅದಕ್ಕೆ ಅಡ್ಡಗಾಲು ಹಾಕುತ್ತಿದೆ. 8 ವರ್ಷಗಳಿಂದ ಮುಸ್ಲಿಮರು ದಾವೆ ಹೂಡುತ್ತಲೇ ಬಂದಿದ್ದರೂ, ಅವುಗಳೆಲ್ಲ ವಜಾ ಆಗಿರುವುದು ದತ್ತಪೀಠ ಹಿಂದೂಗಳಿಗೆ ಸೇರಿದ್ದು ಎಂಬುದಕ್ಕೆ ಮುಖ್ಯ ಪುರಾವೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ದತ್ತಪೀಠ ಸಂಪೂರ್ಣವಾಗಿ ಹಿಂದೂಗಳಿಗೆ ಸೇರಬೇಕಾದ್ದು. ಅಗತ್ಯ ಬಿದ್ದರೆ ವರ್ಷಕ್ಕೊಮ್ಮೆ ಮುಸ್ಲಿಮರಿಗೆ ಪೂಜೆ ಮಾಡುವ ಅವಕಾಶ ನೀಡಲಿ ಎಂದು ಅವರು ದತ್ತಪೀಠದ ವಿಚಾರದಲ್ಲಿ ಹಿಂದೂಗಳು ನಡೆಸುತ್ತಿರುವ ಹೋರಾಟಕ್ಕೆ ತಮ್ಮ ನೈತಿಕ ಬೆಂಬಲವನ್ನು ಸೂಚಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ದತ್ತಾತ್ರೇಯ ಪೀಠ ದೇವಸ್ಥಾನದ ಸಂವರ್ಧನಾ ಸಮಿತಿ ಕಾರ್ಯದರ್ಶಿ ಬಿ.ಎಸ್. ವಿಠ್ಠಲರಾವ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಮತ್ತಷ್ಟು
ಪ್ರೀತಿ... ಬಿಡುಗಡೆಗೆ ಅವಕಾಶ ಕೊಡೆವು: ಶ್ರೀರಾಮ ಸೇನೆ
ತಂದೆ, ತಾಯಿ ಶವದೊಂದಿಗೆ ಎರಡು ರಾತ್ರಿ
ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಚಿಂತನೆ
ಅಶ್ವಿನಿ ಸ್ಟುಡಿಯೋಗೆ ಶ್ರೀರಾಮ ಸೇನಾ ಮುತ್ತಿಗೆ
ಪ್ರಕಾಶ್ ಜೆಡಿಎಸ್‌ನಲ್ಲೇ ಉಳಿಯಲಿ: ಮೆರಾಜುದ್ದೀನ್
ಎಂ.ಪಿ.ಪ್ರಕಾಶ್ ಕಾಂಗ್ರೆ‌ಸ್‌ಗೆ ಸೇರುವರೇ?