ಉಡುಪಿ ಶ್ರೀಕೃಷ್ಣ ಪೂಜೆಯ ಹಕ್ಕು ಅಷ್ಟಮಠಗಳಿಗೆ ಮಾತ್ರ ಸಂಬಂಧಿಸಿದ್ದು, ಉಳಿದ ಯಾರಿಗೂ ಈ ಅವಕಾಶವನ್ನು ನೀಡಲಾಗುವುದಿಲ್ಲವೆಂದು ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಪ್ರತಿಪಾದಿಸಿದ್ದಾರೆ.
ಈ ಹಿಂದೆ ಅಮೆರಿಕಕ್ಕೆ ಹೋಗದ ದಲಿತನೂ ಶ್ರೀಕೃಷ್ಣ ಪೂಜೆ ಮಾಡಲು ಅರ್ಹವೆಂದು ಪೇಜಾವರು ತಿಳಿಸಿದ್ದರೆ ಅವರು ದೊಡ್ಡವರಾಗುತ್ತಿದ್ದರು ಎಂದು ಹೇಳಿದ್ದ ಡಾ.ಯು.ಆರ್. ಅನಂತಮೂರ್ತಿಯವರ ಹೇಳಿಕೆಗೆ ಶ್ರೀಪಾದರು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.
ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತ ಸಂಸ್ಕ್ಕತ ಭಾಷಾ ಸ್ಪರ್ಧಾ ಸಮಾವೇಶದ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಪಾದರು ಎಲ್ಲ ಜಾತಿಯವರನ್ನು ನಾವು ಗೌರವಿಸುತ್ತೇವೆ. ಆದರೆ ಶ್ರೀಕೃಷ್ಣನ ಪೂಜೆಗೆ ಅದರದೇ ಆದ ರೀತಿ ನೀತಿಗಳಿವೆ ಅದನ್ನು ಮೀರಿ ನಡೆಯಲಾಗುವುದಿಲ್ಲ. ಅದನ್ನು ಗೌರವಿಸಬೇಕು ಎಂದು ಸ್ಪಷ್ಟವಾಗಿ ಹೇಳಿದರು.
ಪುತ್ತಿಗೆ ಶ್ರೀಗಳ ವಿಷಯದಲ್ಲಿ ಅಪಾರ ಗೌರವವಿದೆ. ಈ ವಿವಾದವನ್ನು ವಿದ್ವಾಂಸರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. ಸಮುದ್ರೋಲ್ಲಂಘನ ಮಾಡುವುದು ಅಪರಾಧವಲ್ಲ. ಆದರೆ ಇಂದು ವಿದೇಶಿ ಆಕರ್ಷಣೆಯಲ್ಲಿ ಶ್ರೀಕೃಷ್ಣ ಪೂಜೆಯ ವಿಧಿ, ವಿಧಾನಕ್ಕೆ ಹಾಗೂ ಶ್ರೀಕೃಷ್ಣ ಮಠಕ್ಕೆ ಧಕ್ಕೆಯಾಗಬಾರದು ಎಂಬ ಕಳವಳಿ ಮುಖ್ಯ ಎಂದು ಅಭಿಪ್ರಾಯಪಟ್ಟರು.
|