ತಮ್ಮ ಹಾಗೂ ತಮ್ಮ ಬೆಂಬಲಿಗರ ರಾಜಕೀಯ ಭವಿಷ್ಯದ ಕುರಿತು ಇಂದು ನಿರ್ಧಾರ ಪ್ರಕಟಿಸಬೇಕಿದ್ದ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಈಗ ಅದನ್ನು ಮತ್ತೆ ಮುಂದೂಡಿದ್ದಾರೆ.
ಬರಲಿರುವ ಸಂಕ್ರಾಂತಿ ಹಬ್ಬದ ನಂತರ ತಾವು ಸೇರಲಿರುವ ಪಕ್ಷ ಯಾವುದೆಂದು ತಿಳಿಸುವುದಾಗಿ ಪ್ರಕಾಶ್ ಸುದ್ದಿಗಾರರಿಗೆ ತಿಳಿಸಿದರು.. ಸಮಾನ ಮನಸ್ಕರೊಂದಿಗೆ ಚರ್ಚಿಸಿದ ನಂತರವೂ ಅವರಿಗೆ ನಿರ್ಧಾರ ತಳೆಯಲಾಗದಿರುವುದಕ್ಕೆ ಕಾರಣ ಅವರ ಬೆಂಬಲಿಗರಲ್ಲಿ ಮೂಡದ ಒಮ್ಮತ.
ಪ್ರಕಾಶ್ ಬೆಂಬಲಿಗರಲ್ಲಿ ಕೆಲವರಿಗೆ ಕಾಂಗ್ರೆಸ್ ಕಡೆ ಒಲವಿದ್ದರೆ, ಇನ್ನು ಕೆಲವರು ಬಿಜೆಪಿ ಕಡೆ ಆಸಕ್ತಿ ತೋರಿದ್ದಾರೆ. ಆದರೆ ಬಳ್ಳಾರಿ ಗಣಿ ಧಣಿ ಜನಾರ್ಧನ ರೆಡ್ಡಿ ತೀವ್ರ ಪ್ರತಿರೋಧ ತೋರಿರುವ ಹಿನ್ನೆಲೆಯಲ್ಲಿ ಯಾವುದೇ ಪಕ್ಷದ ಬಾಗಿಲು ತಟ್ಟಬೇಕಾದ ಪರಿಸ್ಥಿತಿ ನನಗೆ ಬಂದಿಲ್ಲ ಎಂದು ಪ್ರಕಾಶ್ ಪ್ರತಿಕ್ರಿಯಿಸಿದ್ದಾರೆ.
ಈಗ ಅವರೆದುರಿರುವ ಆಯ್ಕೆ ಕಾಂಗ್ರೆಸ್ ಪಕ್ಷ. ಆದರೆ ತಮ್ಮ ಹಳೆಯ ಸಹವರ್ತಿ ಸಿದ್ದರಾಮಯ್ಯನವರಿಗೆ ಕಾಂಗ್ರೆಸ್‌ನಲ್ಲಿ ಸೂಕ್ತ ಸ್ಥಾನಮಾನ ಇನ್ನೂ ಸಿಗದಿರುವುದರಿಂದ ಪ್ರಕಾಶ್ ವರಿಗೆ ತಮ್ಮ ಭವಿಷ್ಯದ ಕುರಿತು ಒಳಗೊಳಗೇ ಅನುಮಾನವಿತ್ತು. ನಿನ್ನೆ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್‌ವರೊಂದಿಗಿನ ಭೇಟಿಯಲ್ಲಿ ತಮ್ಮ ನಿರೀಕ್ಷೆ-ಬೇಡಿಕೆಗಳ ಕುರಿತು ಪ್ರಕಾಶ್ ಈಗಾಗಲೇ ವಿವರಣೆ ನೀಡಿದ್ದಾರೆ. ಅದರ ಕುರಿತು ಹೈಕಮಾಂಡ್ ಅನುಮೋದನೆ ಸಿಕ್ಕಿದಲ್ಲಿ ಕಾಂಗ್ರೆಸ್ ಕೈಗೆ ಮತ್ತೊಂದು ದಳ ಸೇರಿದಂತಾಗುತ್ತದೆ.
|