ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಯುವ ಕಾಂಗ್ರೆಸ್ ಚೈತನ್ಯ ಸಮಾವೇಶದಲ್ಲಿ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಮಾಜಿ ಸಚಿವ ಎಂ.ಮಹದೇವ್ ಅನುಚಿತವಾಗಿ ನಡೆದುಕೊಂಡರು ಎಂದು ಅಹಿಂದ ಸಂಘಟನೆ ಆರೋಪಿಸಿದ್ದು, ಈ ಹಿನ್ನೆಲೆಯಲ್ಲಿ ಮಹದೇವ್ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಒತ್ತಾಯಿಸಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಎಂ.ರಘುಪತಿಯುವರು, ಚೈತನ್ಯ ಸಮಾವೇಶದ ಸಂದರ್ಭದಲ್ಲಿ ನಡೆದ ಈ ಘಟನೆಯ ಹಿಂದೆ ಕೆಲವೊಂದು ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡಿವೆ ಎಂದು ಆರೋಪಿಸಿದರು.
ಸಿದ್ದರಾಮಯ್ಯನವರ ವ್ಯಕ್ತಿತ್ವಕ್ಕೇ ಕಪ್ಪು ಮಸಿ ಬಳಿಯುವ ಪ್ರಯತ್ನವಿದು ಎನ್ನದೇ ವಿಧಿಯಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಅಪಚಾರ ಮಾಡಿರುವ ಮಾಜಿ ಸಚಿವ ಮಹದೇವ್ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ತಿಳಿಸಿದ ರಘುಪತಿ, ಈ ಘಟನೆಗೆ ಈಗ ಜಾತಿ ರಾಜಕೀಯವೂ ಸೇರಿರುವ ಕುರಿತು ವಿಷಾದಿಸಿದರು.
ರಾಜ್ಯದಲ್ಲಿ ಇಂತಹ ಜಾತಿ ರಾಜಕಾರಣ ಇನ್ನು ಮುಂದೆ ನಡೆಯಬಾರದು. ಈ ದೃಷ್ಟಿಯಿಂದ ಮುರುಘಾಮಠ, ಸುತ್ತೂರು ಹಾಗೂ ಸಿದ್ದಗಂಗಾ ಶ್ರೀಗಳು ಈ ಸಮಸ್ಯೆಯನ್ನು ಪರಿಹರಿಸಬೇಕು ಎಂದು ತಾವು ವಿನಂತಿಸುವುದಾಗಿ ರಘುಪತಿ ತಿಳಿಸಿದರು.
|