ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದರ ಏರಿಕೆ ಹಗಲು ದರೋಡೆಯಲ್ಲ: ಹೊಟೇಲು ಸಂಘ
ಹೊಟೇಲುಗಳಲ್ಲಿ ತಿಂಡಿ ತಿನಿಸು ಮತ್ತು ಪಾನೀಯಗಳ ದರದಲ್ಲಿ ಒಂದು ರೂಪಾಯಿ ಏರಿಕೆ ಮಾಡಿರುವುದನ್ನು ಹಗಲು ದರೋಡೆ ಎಂಬಂತೆ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ವರದಿಗಳು ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿರುವುದು ಖಂಡನೀಯ ಎಂದು ಹೊಟೇಲುಗಳ ಸಂಘವು ಆರೋಪಿಸಿದೆ.

ಹೊಟೇಲು ಉದ್ಯಮಕ್ಕೆ ಪೂರಕವಾದ ಎಲ್ಪಿಜಿ, ಖಾದ್ಯತೈಲ, ಕಾಫಿ ಪುಡಿ, ಟೀ ಪುಡಿ, ಉದ್ದಿನ ಬೇಳೆ, ಹಾಲು, ಮೊಸರು, ವ್ಯಾಪಾರ ಪರವಾನಿಗೆ ಶುಲ್ಕ, ಹಣ್ಣು-ತರಕಾರಿ ಇವೇ ಮೊದಲಾದ ವಸ್ತುಗಳ ಬೆಲೆಗಳು ಹಾಗೂ ಬಾಡಿಗೆ ಮೇಲೆ ವಿಧಿಸಿರುವ ಸರ್ವಿಸ್ ಟ್ಯಾಕ್ಸ್ ಕಳೆದ ಕೆಲವು ತಿಂಗಳಲ್ಲಿ ಹಲವು ಬಾರಿ ಏರಿಕೆ ಕಂಡಿರುವುದು ಹೊಟೇಲುಗಳಲ್ಲಿ ದರ ಏರಿಕೆಗೆ ಪ್ರಮುಖ ಕಾರಣವಾಗಿದೆ.

ಇವಲ್ಲದೆ, ಉದ್ಯಮ ನಿರ್ವಹಣೆ ವೆಚ್ಚ, ಕಸ ವಿಲೇವಾರಿ ವೆಚ್ಚ, ಕಾರ್ಮಿಕರ ವೇತನ ಮತ್ತು ಭತ್ಯೆ, ವಿದ್ಯುತ್, ನೀರು, ಪರಿಸರ ಇಲಾಖೆ, ತೂಕ ಅಳತೆ ನಿಯಂತ್ರಣ ಇಲಾಖೆ, ಇಂಡಿಯನ್ ಮ್ಯೂಸಿಕ್ ಪರ್ಫಾರ್ಮೆನ್ಸ್ ಆ್ಯಕ್ಟ್ ಹೀಗೆ ಪ್ರತಿಯೊಂದು ವೆಚ್ಚಗಳೂ ಅತೀವ ಏರಿಕೆ ಕಾಣುತ್ತಿವೆ. ಲೈಸೆನ್ಸ್, ಕಾನೂನು-ಕಟ್ಟಳೆ-ತೆರಿಗೆಗಳಿಲ್ಲದ ಅನಿಯಂತ್ರಿತ ಫುಟ್ಪಾತ್ ವ್ಯಾಪಾರದಿಂದ ಹೊಟೇಲ್ ಉದ್ಯಮಕ್ಕೆ ತೀವ್ರ ಪೈಪೋಟಿಯಾಗಿರುವುದೇ ಅಲ್ಲದೆ ಸರಕಾರಕ್ಕೆ ತೆರಿಗೆ ನಷ್ಟ ಉಂಟಾಗುತ್ತಿದೆ.

ಇವೆಲ್ಲ ಸಮಸ್ಯೆಗಳ ಮಧ್ಯೆಯೂ ಇತರೆಡೆಗಳಿಗಿಂತ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಆಹಾರವನ್ನು ಬೆಂಗಳೂರಿನ ಹೊಟೇಲುಗಳು ಗ್ರಾಹಕರಿಗೆ ನೀಡುತ್ತಾ ಬಂದಿವೆ. ಹೆಚ್ಚುವರಿ ಹೊರೆಯನ್ನು ಭರಿಸಲಾರದ ಸ್ಥಿತಿಯಲ್ಲಿಯೂ ಆಹಾರ ಪಾನೀಯಗಳ ಮೇಲೆ ಕೇವಲ ಒಂದು ರೂಪಾಯಿ ಮಾತ್ರ ಏರಿಕೆ ಮಾಡಿರುವುದಕ್ಕೆ ಗ್ರಾಹಕ ಸಮುದಾಯವು ಬೆಂಬಲ ನೀಡುವ ಮೂಲಕ ಉತ್ತಮ ಗುಣಮಟ್ಟದ ಸೇವೆಯನ್ನು ಪ್ರೌತ್ಸಾಹಿಸಬೇಕಾಗಿದೆ.

ಅಲ್ಲದೆ, ಮಾಧ್ಯಮಗಳು ವಾಸ್ತವ ಪರಿಸ್ಥಿತಿಯನ್ನು ಅರಿತು ವರದಿಗಳನ್ನು ಪ್ರಕಟಿಸಬೇಕೆಂದು ಬೆಂಗಳೂರು ಹೊಟೇಲುಗಳ ಸಂಘದ ಅಧ್ಯಕ್ಷರಾದ ಶ್ರೀ. ಕೆ.ಎನ್. ವಾಸುದೇವ ಅಡಿಗ ಮತ್ತು ಗೌರವ ಕಾರ್ಯದರ್ಶಿಗಳಾದ ಶ್ರೀ ಪಿ.ಸಿ. ರಾವ್ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.
ಮತ್ತಷ್ಟು
ಕ್ಷಮೆ ಕೇಳದಿದ್ದರೆ ಪ್ರತಿಭಟನೆ: ಯಡಿಯೂರಪ್ಪ
ರೈತರ ಸಹಾಯಕ್ಕೆ ಸಲಹಾ ಕೇಂದ್ರ
ಅಕ್ಕ ವತಿಯಿಂದ ವಿಶ್ವ ಕನ್ನಡ ಸಮ್ಮೇಳನ
ಚಿತ್ರಮಂದಿರಕ್ಕೆ ಲಗ್ಗೆ ಹಾಕಿದ ಶ್ರೀರಾಮಸೇನೆ
ವಿದ್ಯುತ್ ರಂಗದಲ್ಲಿ ಬದಲಾವಣೆ ಅಗತ್ಯ
ಸಿ.ಡಿ. ಕಳಿಸಿದ್ರೆ ಕಳಿಸ್ಲಿ: ಸಿದ್ದರಾಮಯ್ಯ ಕಿಡಿ