ಮೈಸೂರು ವಿಶ್ವವಿದ್ಯಾಲಯಕ್ಕೆ ನೂತನ ಕುಲಪತಿಯ ನೇಮಕದ ಸಂಬಂಧ ನಿಯೋಜಿಸಲಾಗಿದ್ದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ವಿಶ್ರಾಂತ ಕುಲಪತಿ ಡಾ. ಚಂದ್ರಶೇಖರ ಶೆಟ್ಟಿ ನೇತೃತ್ವದ ಶೋಧನ ಸಮಿತಿಯು ತನ್ನ ವರದಿಯನ್ನು ರಾಜ್ಯಪಾಲ ರಾಮೇಶ್ವರ ಠಾಕೂರ್‌ರವವರಿಗೆ ಸಲ್ಲಿಸಿದೆ.
ಮೈಸೂರು ವಿವಿ ಕುಲಪತಿಯಾಗಿದ್ದ ಪ್ರೊ. ಜೆ. ಶಶಿಧರ ಪ್ರಸಾದ್ ಅವರ ಅವಧಿ ಅಕ್ಟೋಬರ್ 23ರಂದು ಪೂರ್ಣಗೊಂಡ ಹಿನ್ನೆಲೆಯಲ್ಲಿ ಹೊಸ ಕುಲಪತಿ ನೇಮಕಕ್ಕೆ ಶೋಧನಾ ಸಮಿತಿಯನ್ನು ರಚಿಸಲಾಗಿತ್ತು.
ಕುಲಪತಿ ಸ್ಥಾನಕ್ಕೆ ಹಲವು ಹೆಸರುಗಳನ್ನು ಪರೀಶೀಲಿಸಿದ ಸಮಿತಿ ಅಂತಿಮವಾಗಿ ಮೂವರ ಹೆಸರುಗಳನ್ನು ರಾಜ್ಯಪಾಲರಿಗೆ ಸಲ್ಲಿಸಿದೆ. ಕುವೆಂಪು ವಿವಿ ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಅಬ್ದುಲ್ ರೆಹಮಾನ್, ಮೈಸೂರು ವಿವಿ ರಸಾಯನ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಎಸ್. ರಂಗಪ್ಪ ಹಾಗೂ ಬೆಂಗಳೂರು ವಿವಿ ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ. ಎಸ್. ಚಂದ್ರಶೇಖರ್‌ರವರ ಹೆಸರುಗಳನ್ನು ಸಮಿತಿ ಶಿಫಾರಸು ಮಾಡಿದೆ.
ಅಂತಿಮವಾಗಿ ಸಮಿತಿ ಶಿಫಾರಸು ಮಾಡಿದ ಹೆಸರುಗಳಲ್ಲಿ ರಾಜ್ಯಪಾಲರು ಒಬ್ಬರನ್ನು ಮೈಸೂರು ವಿವಿಯ ಕುಲಪತಿಯನ್ನಾಗಿ ಒಂದೆರಡು ದಿನಗಳಲ್ಲಿ ನೇಮಕ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಇಂದಿರಾಗಾಂಧಿ ಮುಕ್ತ ವಿವಿ ವಿಶ್ರಾಂತ ಕುಲಪತಿ ಪ್ರೊ. ಬಿ.ಎಸ್. ಶರ್ಮ, ಹೈದರಾಬಾದ್ ಮೌಲಾನ ಆಜಾದ್ ಉರ್ದು ವಿ.ವಿ.ಯ ವಿಶ್ರಾಂತ ಕುಲಪತಿ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ಮಾಜಿ ನಿರ್ದೇಶಕ ಪ್ರೊ. ಗೋವರ್ಧನ್ ಮೆಹ್ತಾರವರು ಶೋಧನಾ ಸಮಿತಿಯ ಇತರ ಸದಸ್ಯರಾಗಿದ್ದಾರೆ.
|