ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಸರಕಾರ ಮತ್ತು ಶಿಕ್ಷಣ ಸಂಸ್ಥೆಗಳ ನಡುವೆ ಅನುಸರಿಸಲಾಗಿದ್ದ ಪದ್ದತಿಯನ್ನು ಈ ಬಾರಿಯ ಶೈಕ್ಷಣಿಕ ವರ್ಷದಲ್ಲಿ 55:45ರ ಅನುಪಾತದಲ್ಲಿ ಎಂಜಿನಿಯರಿಂಗ್, ವೈದ್ಯಕೀಯ ಮತ್ತು ದಂತ ವೈದ್ಯಕೀಯ ವೃತ್ತಿ ಶಿಕ್ಷಣದ ಸೀಟು ಹಂಚಿಕೆ ಮಾಡಿಕೊಳ್ಳಲು ಸರ್ಕಾರ ಮತ್ತು ಕಾಮೆಡ್-ಕೆ ತೀರ್ಮಾನಿಸಿವೆ.
ವಿಕಾಸಸೌಧದಲ್ಲಿ ರಾಜ್ಯಪಾಲರ ಸಲಹೆಗಾರ ಕೃಷ್ಣಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿಯಿತೆಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಸಿಇಟಿ)ದ ವಿಶೇಷಧಿಕಾರಿ ಎಸ್. ಈ. ಹೆಗಡೆ ಸುದ್ದಿಗಾರರಿಗೆ ತಿಳಿಸಿದರು.
ಇದರಲ್ಲಿ ಕರ್ನಾಟಕ ಧಾರ್ಮಿಕ ಹಾಗೂ ಭಾಷಾ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪರೀಕ್ಷೆ ಮೂಲಕ ಶೇ. 45 ರಷ್ಟು ಸೀಟುಗಳು ಸರ್ಕಾರಕ್ಕೆ ಹಾಗೂ ಶೇ. 55ರಷ್ಟು ಸೀಟುಗಳು ಆಡಳಿತ ಮಂಡಳಿಗೆ ನೀಡಲಾಗುತ್ತದೆ. ಆಡಳಿತ ಮಂಡಳಿಗೆ ಹಂಚಿಕೆಯಾಗಿರುವ ಸೀಟುಗಳಲ್ಲಿ ಶೇ.15ರಷ್ಟು ಸೀಟುಗಳನ್ನು ಅನಿವಾಸಿ ಭಾರತೀಯರಿಗೆ ಹಾಗೂ ಶೇ. 5ರಷ್ಟು ವಿವೇಚನಾ ಕೋಟಾಕ್ಕೆ ನೀಡಲಾಗುತ್ತದೆ.
ಚುನಾಯಿತ ಸರ್ಕಾರ ಆಡಳಿತದಲ್ಲಿರದ ಕಾರಣ ಸೀಟುಗಳ ಹಂಚಿಕೆ ಬದಲಾಯಿಸುವುದು ತರವಲ್ಲ. ಆದ್ದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ.
|